ಉಡುಪಿ/ಮಂಗಳೂರು: ಕುಂದಾಪುರದ ಕೆದೂರು ಸಮೀಪ ರೈಲ್ವೆ ಹಳಿ ಮೇಲೆ ಮೂರ್ನಾಲ್ಕು ಅಡಿವರೆಗೆ ನೀರು ಹರಿಯುತ್ತಿದ್ದರೆ, ಇತ್ತ ಸುಬ್ರಹ್ಮಣ್ಯ ಮತ್ತು ಸಕಲೇಶಪುರ ಮಧ್ಯೆ ಸಿರಿಬಾಗಿಲುವಿನಲ್ಲಿ ರೈಲು ಹಳಿಯಲ್ಲಿ ಮಣ್ಣು ಕುಸಿದ ಪರಿಣಾಮ ರೈಲು ಸಂಚಾರಕ್ಕೆ ತೊಡಕಾಗಿದೆ.
![Driver's time consciousness](https://etvbharatimages.akamaized.net/etvbharat/prod-images/kn-udp-06-train-anahutha-bachav-image-7202200-av6jpg_06082019203957_0608f_1565104197_953.jpg)
ಕುಂದಾಪುರದ ಕೆದೂರು ಸಮೀಪ ರೈಲ್ವೆ ಹಳಿ ಮೇಲೆ ಮೂರ್ನಾಲ್ಕು ಅಡಿ ನೀರು ಹರಿಯುತ್ತಿತ್ತು. ಅದೇ ವೇಳೆಯಲ್ಲಿ ಮುಂಬೈನಿಂದ ಮಂಗಳೂರಿಗೆ ರೈಲು ಸಾಗಬೇಕಾಗಿತ್ತು. ಕೆದೂರು ಬಳಿ ಹಳಿಯಲ್ಲಿ ಎಚ್ಚರಿಕೆ ವಹಿಸುವಂತೆ ಕುಂದಾಪುರ ರೈಲ್ವೆ ವಲಯದಿಂದ ಸೂಚನೆ ನೀಡಲಾಗಿತ್ತು. ಸಕಾಲದಲ್ಲಿ ರೈಲು ಹಳಿಯಲ್ಲಿ ನೀರು ಕಂಡ ಚಾಲಕ ತಕ್ಷಣ ರೈಲು ನಿಲ್ಲಿಸಿ ಆ ಮಳೆಯಲ್ಲೇ ಕಿಲೋಮೀಟರ್ ದೂರ ನಡೆದು ಹಳಿ ವೀಕ್ಷಣೆ ಮಾಡಿದ್ದಾರೆ. ಆಗ ನೀರು ತುಂಬಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ್ದ. ಅಲ್ಲದೇ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ, ಭಯವಾಗರದೆಂಬ ನಿಟ್ಟಿನಲ್ಲಿ ಸುಮಾರು 20 ನಿಮಿಷಗಳಷ್ಟು ಕಾಲ ರೈಲನ್ನು ನಿಲ್ಲಿಸಿ ಮಳೆ ನೀರು ಹತೋಟಿಗೆ ಬಂದ ಬಳಿಕ ರೈಲನ್ನು ಮಂಗಳೂರಿನತ್ತ ಚಲಾಯಿಸಿದ್ದಾನೆ.
ರೈಲಿನಲ್ಲಿದ್ದ ಸಾವಿರಾರು ಮಂದಿಯ ಪ್ರಾಣ ರಕ್ಷಣೆ ಹಿನ್ನೆಲೆಯಲ್ಲಿ ರೈಲು ಚಾಲಕ ತೋರಿದ ಸಮಯಪ್ರಜ್ಞೆಗೆ ರೈಲ್ವೆ ಇಲಾಖಾಧಿಕಾರಿಗಳು ಸೇರಿದಂತೆ ಸಾರ್ವಜನಿಕರೂ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
![Manglore siribagilu](https://etvbharatimages.akamaized.net/etvbharat/prod-images/kn-mng-03-traindiverted-photo-7202146_06082019221717_0608f_1565110037_253.jpg)
ಇನ್ನು ಮಧ್ಯಾಹ್ನದಿಂದ ಮಂಗಳೂರಿನ ಸಿರಿಬಾಗಿಲುವಿನಲ್ಲಿ ಮಣ್ಣು ಕುಸಿತ ತೆರವು ಕಾರ್ಯಾಚರಣೆ ನಡೆಸಲಾಯಿತಾದರೂ ಅದು ಪೂರ್ಣವಾಗದ ಹಿನ್ನೆಲೆಯಲ್ಲಿ ಮಂಗಳೂರು ಬೆಂಗಳೂರು ರೈಲು ಸಂಚಾರದ ಮಾರ್ಗ ಬದಲಾವಣೆ ಮಾಡಲಾಯಿತು. ಕಾರವಾರದಿಂದ ಮಂಗಳೂರು ಮತ್ತು ಕಣ್ಣೂರಿನಿಂದ ಮಂಗಳೂರಿಗೆ ಬರುವ ಎರಡು ರೈಲುಗಳು ಮಂಗಳೂರಿನಿಂದ ಒಂದು ರೈಲು ಆಗಿ ಬೆಂಗಳೂರಿಗೆ ತೆರಳಲಿದೆ. ಆದರೆ ಇಂದು ಸಿರಿಬಾಗಿಲುವಿನಲ್ಲಿ ಮಣ್ಣು ಕುಸಿತದ ಪರಿಣಾಮ ಕೇರಳ, ತಮಿಳುನಾಡು ಮೂಲಕ ಬೆಂಗಳೂರಿಗೆ ತೆರಳಿದೆ.