ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.26 ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ 16 ಮಂದಿ ಆರೋಪಿಗಳನ್ನು ಇಲ್ಲಿನ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ್ ಅವರ ಮುಂದೆ ಹಾಜರುಪಡಿಸಲಾಗಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಅಭಿಷೇಕ್ ಪಾಲನ್, ರೊಟ್ಟಿ ನಾಗರಾಜ್, ಸಂತೋಷ್ ಕುಂದರ್, ಪ್ರಣವ್ ರಾವ್, ಪವನ್ ಅಮೀನ್, ವಿರೇಂದ್ರ ಆಚಾರ್ಯ, ರಿತೀಶ್ ಕರ್ಕೇರಾ, ಶಂಕರ ಮೊಗವೀರ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜಶೇಖರ ರೆಡ್ಡಿ, ಹರೀಶ್ ರೆಡ್ಡಿ, ರಾಘವೇಂದ್ರ ಕಾಂಚನ್, ಮಹೇಶ್ ಗಾಣಿಗ, ರವಿಚಂದ್ರ ಹಾಗೂ ರವೀಂದ್ರ ಅವರಿಗೆ ಮಾ.1 ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಗುರುವಾರ ಬಂಧಿಸಲ್ಪಟ್ಟ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಚಂದ್ರಶೇಖರ ರೆಡ್ಡಿ ಹಾಗೂ ಸುಜಯ್ ಅವರಿಗೆ ಫೆ.20 ರವರೆಗೆ ಪೊಲೀಸ್ ಕಸ್ಟಡಿ ನೀಡಲಾಗಿದೆ.
ಜಾಮೀನಿಗಾಗಿ ಅರ್ಜಿ:
ಪ್ರಕರಣದಲ್ಲಿ ಆರೋಪಿಗಳಾಗಿರುವ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ ಹಾಗೂ ಕಾಲೇಜು ವಿದ್ಯಾರ್ಥಿಯಾಗಿರುವ ಪ್ರಣವ್ ರಾವ್ ಅವರಿಗೆ ಜಾಮೀನು ನೀಡುವಂತೆ ಮನವಿ ಸಲ್ಲಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.