ಉಡುಪಿ: ಯಾವುದೇ ವಾಮಮಾರ್ಗ ಅಥವಾ ಲಾಬಿ ಮೂಲಕ ಸಚಿವ ಸ್ಥಾನ ಪಡೆಯೋದು ಗೊತ್ತಿಲ್ಲ. ಗುಂಪುಗಾರಿಕೆಯ ರಾಜಕೀಯ ಮಾಡುವುದಿಲ್ಲ ಎಂದು ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಇಂದು ತಮ್ಮ ಕಚೇರಿಯಲ್ಲಿ ಬೆಂಬಲಿಗರ ಜತೆ ಸಮಾಲೋಚನೆ ನಡೆಸಿದ್ರು. ಇಂದು ನಡೆದ ಸಚಿವ ಸಂಪುಟ ರಚನೆಗೆ ಗೈರಾಗಿದ್ದು. ನನಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ಬಂದಿರಲಿಲ್ಲ ಎಂದು ಹೇಳಿದ್ರು.
ಕಳೆದ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಕೈ ತಪ್ಪಿದ್ದರಿಂದ ಪಕ್ಷಕ್ಕೇ ಗುಡ್ ಬೈ ಹೇಳಿ ಪಕ್ಷೇತರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ನಂತರ ಬಿ.ಎಸ್.ವೈ ಮನವೊಲಿಕೆ ಮಾಡಿದ್ದರಿಂದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಬಿಜೆಪಿಗೆ ಸೇರಿ ಬಿಜೆಪಿ ಟಿಕೆಟ್ ಪಡೆದು ಗೆದ್ದಿದ್ದರು. ಇಂದಿನ ಸಚಿವ ಸಂಪುಟ ರಚನೆಯಲ್ಲಿ ಜಿಲ್ಲೆಯ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಂದಾಪುರದ ಬಂಟ ಸಮುದಾಯದ ನಾಯಕನಾಗಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿ, ಜಾತಿ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ. ಪ್ರಮಾಣಿಕವಾಗಿ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇನೆ. ಪಕ್ಷ ನಿಷ್ಠೆ ತೋರಿದ್ದೇನೆ. ಪಕ್ಷೇತರನಾಗಿದ್ದಾಗಲೂ ಬಿಜೆಪಿ ಬೆಂಬಲಿಸಿದ್ದೇನೆ. ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ಅನ್ನೋದು ಗೊತ್ತಿಲ್ಲ ಎಂದರು.
ನನಗೆ ಸಚಿವ ಸಿಗದಿರುವುದು ಯಾಕೆ ಎಂಬುದು ನನಗೂ ಗೊತ್ತಿಲ್ಲ. ಬಿಜೆಪಿ ಪ್ರಮುಖ ನಾಯಕರನ್ನು ಕೇಳಿ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.