ಉಡುಪಿ: ಜೂನ್ 7ರೊಳಗೆ ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ 10 ರೊಳಗೆ ತರಬೇಕಿದೆ. ಹೀಗಾದಲ್ಲಿ ಮಾತ್ರ ಮುಂದಿನ ಲಾಕ್ಡೌನ್ ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಈ ಹಿಂದೆ ಜಿಲ್ಲೆಯಲ್ಲಿ ಶೇ. 38ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇದೀಗ ಶೇ. 19ಕ್ಕೆ ಇಳಿದಿದೆ. ಆಕ್ಸಿಜನ್ ಹಾಗು ವೆಂಟಿಲೇಟರ್ ಬೆಡ್ ಕೊರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಈ ಹಿಂದೆ ಬಳಕೆಯಾಗುತ್ತಿದ್ದ 800ರಷ್ಟು ಆಕ್ಸಿಜನ್ ಸಿಲಿಂಡರ್ ಸಂಖ್ಯೆ ಈಗ 390ಕ್ಕೆ ಇಳಿದಿದೆ. ಇದೆಲ್ಲವೂ ಕೊರೊನಾ ಕಡಿಮೆಯಾಗಿರುವ ಲಕ್ಷಣ.
ಆದರೆ, ಒಂದಿಷ್ಟು ಮಂದಿ ಸುಖಾಸುಮ್ಮನೆ ತಿರುಗಾಡುತ್ತಿದ್ದಾರೆ. ಶನಿವಾರ ನಡೆದ ತಪಾಸಣೆಯಲ್ಲಿ ಅನಗತ್ಯ ತಿರುಗಾಡುತ್ತಿದ್ದ 35 ಮಂದಿಯ ವಾಹನವನ್ನು ನಾನೇ ಮುಟ್ಟುಗೋಲು ಹಾಕಿದ್ದೇನೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲು ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿದಿನ ಎರಡುವರೆ ಸಾವಿರದ ಬದಲು ಮೂರುವರೆ ಸಾವಿರ ಟೆಸ್ಟ್ ಮಾಡುತ್ತಿದ್ದಾರೆ.
ಪರೀಕ್ಷೆ ಹೆಚ್ಚು ಮಾಡಿ, ಬೇಗ ಸೋಂಕು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶ. ಇನ್ನಾದರೂ ಸಾರ್ವಜನಿಕರು ಅನಗತ್ಯ ತಿರುಗಾಡಿ, ಉಡಾಫೆ ಮಾತನಾಡುವುದು ಬಿಡಬೇಕು. ದಯವಿಟ್ಟು ಸಾರ್ವಜನಿಕರು ಇನ್ನು ಒಂದು ವಾರ ಹೆಚ್ಚು ಸಹಕರಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ಸೋಂಕಿತರಿಗೆ ವಿಕಿರಣ ಚಿಕಿತ್ಸೆ ಪ್ರಯೋಗ: 3ನೇ ಅಲೆ ತಡೆಗೆ ಸಹಾಯವಾಗುತ್ತಾ ಈ ವಿಧಾನ?