ಉಡುಪಿ: ರೈತನೋರ್ವನ ಪುತ್ರ ರೈತರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮತ್ತು ಆರೋಗ್ಯಕ್ಕಾಗಿ ಕನ್ಯಾಕುಮಾರಿಯಿಂದ ಲಡಾಕ್ಗೆ ಸೈಕಲ್ ಪ್ರಯಾಣ ಆರಂಭಿಸಿದ್ದು, ಇದೀಗ ಉಡುಪಿ ತಲುಪಿದ್ದಾನೆ.
ಕೇರಳ ಮೂಲದ ಬಡ ಕುಟುಂಬದ ದ್ವಿತೀಯ ಬಿ.ಇ. ವಿದ್ಯಾರ್ಥಿ ಸಂಜಯ್ ಶ್ರೀ ಕುಮಾರ್ ಕನ್ಯಾಕುಮಾರಿಯಿಂದ ಲಡಾಕ್ವರೆಗೆ ರೈತರಿಗೆ ಬೆಂಬಲ ನೀಡಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿದ್ದಾನೆ.
ತಂದೆ ಉಪಯೋಗಿಸುತ್ತಿದ್ದ ಸಾಮಾನ್ಯ ಪೆಡಲಿಂಗ್ ಸೈಕಲ್ ಮೂಲಕ ದೇಶದ ಕನ್ಯಾಕುಮಾರಿ ಮೂಲೆಯಿಂದ ಲಡಾಕ್ಗೆ ಸೈಕಲ್ ಯಾತ್ರೆ ಮಾಡುತ್ತಿರುವ ಸಂಜಯ್, ಈಗಾಗಲೇ 850 ಕಿಲೋ ಮೀಟರ್ ಕ್ರಮಿಸಿ ಉಡುಪಿ ತಲುಪಿದ್ದಾನೆ. ಸಮಾಜಸೇವಕ ಕೃಷ್ಣಮೂರ್ತಿ ಕಿನ್ನಿಮೂಲ್ಕಿ ಮತ್ತು ಉಡುಪಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಸಂಜಯ್ ಅವರನ್ನು ಉಡುಪಿಯಲ್ಲಿ ಸಮ್ಮಾನಿಸಿ ಸೈಕಲ್ ಯಾತ್ರೆಗೆ ಶುಭ ಹಾರೈಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಜ. 16ರಿಂದ ಕೊರೊನಾ ವ್ಯಾಕ್ಸಿನೇಷನ್ ಕಿಕ್ ಸ್ಟಾರ್ಟ್: ರಾಜ್ಯಕ್ಕೆ ಎಷ್ಟು ಬಾಟಲ್ಸ್ ವ್ಯಾಕ್ಸಿನ್ ಬರಲಿದೆ?
ಏನಾದರು ಸಾಧನೆ ಮಾಡುವ ಛಲ ಮತ್ತು ದೇಶದ ಬೆನ್ನೆಲುಬಾಗಿರುವ ರೈತರನ್ನು ಬೆಂಬಲಿಸುವ ಸಲುವಾಗಿ ಈ ಸೈಕಲ್ ಯಾತ್ರೆ ಮಾಡುತ್ತಿದ್ದು, ಇದಕ್ಕೆ ಮನೆಯವರ ಸಂಪೂರ್ಣ ಸಹಕಾರ ಕೂಡಾ ಇದೆಯಂತೆ. ಸಂಜಯ್ ಯಾತ್ರೆ ಡಿಸೆಂಬರ್ನಲ್ಲಿ ಆರಂಭಗೊಂಡಿದ್ದು, ಫೆಬ್ರವರಿಯ ಸುಮಾರಿಗೆ ಲಡಾಕ್ ಮುಟ್ಟುವ ಗುರಿ ಹೊಂದಿದ್ದಾನೆ. 3,805 ಕಿಲೋ ಮೀಟರ್ ಉದ್ದ ಈ ಪಯಣ ಇರಲಿದೆ.