ಉಡುಪಿ: ಕೊರೊನಾ ಎಲ್ಲಾ ಕ್ಷೇತ್ರಗಳ ಮೇಲೂ ತನ್ನದೇ ಆದ ಪರಿಣಾಮವನ್ನು ಉಂಟು ಮಾಡಿದೆ. ಸುಶಿಕ್ಷಿತರ ಜಿಲ್ಲೆ ಉಡುಪಿಯಲ್ಲಿ ಕೊರೊನಾದಿಂದ ಆರೋಗ್ಯ ಕಾಳಜಿ ಈ ಮೊದಲಿಗಿಂತಲೂ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಮೊದಲು ಕಂಡ ಕಂಡಲ್ಲಿ ಉಗುಳೋದು ಹಾಗೂ ಅಲ್ಲಲ್ಲಿ ಕಸದ ರಾಶಿ ಸುರಿಯೋದು ಕೆಲವು ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ ಎಂಬಂತಿತ್ತು. ಕೊರೊನಾ ಬಂದಮೇಲೆ ಇದಕ್ಕೆಲ್ಲಾ ಕಡಿವಾಣ ಬಿದ್ದಿದೆ ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂದನ್ ಹೇಳುತ್ತಾರೆ.
ಇದರ ಜೊತೆಗೆ ಈ ಹಿಂದೆ ಸಣ್ಣಪುಟ್ಟ ಕಾಯಿಲೆಗೂ ಜನ ಆಸ್ಪತ್ರೆಗೆ ಬರುತ್ತಿದ್ದರು. ಆದ್ರೀಗ ಆಸ್ಪತ್ರೆಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರಣದಿಂದ ಜನರೂ ಆರೋಗ್ಯವಂತರಾಗುತ್ತಿದ್ದಾರೆ.
ಜಿಲ್ಲಾಸ್ಪತ್ರೆಯ ಅಂಕಿಅಂಶಗಳನ್ನು ಗಮನಿಸಿದರೆ, ಹಿಂದೆ ಒಂದು ದಿನಕ್ಕೆ ಸಾವಿರಾರು ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಕೇವಲ 200 ಮಂದಿ ಹೊರರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಒಳರೋಗಿಗಳ ಸಂಖ್ಯೆ ಇನ್ನೂರರಿಂದ 80ಕ್ಕೆ ಇಳಿದಿದೆ ಎಂದು ಡಾ.ಮಧುಸೂದನ್ ಮಾಹಿತಿ ನೀಡಿದ್ದಾರೆ.