ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಅಲ್ಲಲ್ಲಿ ನೆರೆ ಭೀತಿ ಆವರಿಸಿದೆ. ಬ್ರಹ್ಮಾವರದ ಬೈಕಾಡಿ, ಉಪ್ಪೂರು ಪ್ರದೇಶಗಳಲ್ಲಿ ನೆರೆಯ ಭೀತಿ ಆವರಿಸಿದ್ದು, ಕುಂದಾಪುರದ ಶಿರಿಯಾರ ಸಕ್ಕಟ್ಟು ಪ್ರದೇಶದಲ್ಲೂ ನೆರೆ ಆವರಿಸಿದೆ.
ಕಾರ್ಕಳ, ಕುಂದಾಪುರ, ಬೈಂದೂರಿನಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಮನೆ, ತೋಟದ ಆವರಣಗಳಲ್ಲಿ ನೀರಿನ ಹರಿವು ಹೆಚ್ಚಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ವಿದ್ಯುತ್ ಕಂಬಗಳು ಮಳೆ ಗಾಳಿಯ ಹೊಡೆತಕ್ಕೆ ಮುರಿದು ಬೀಳುತ್ತಿವೆ. ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದ್ದು, ಇಂದು ಮತ್ತು ನಾಳೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ತೀರದಲ್ಲಿ ಕಡಲ ಕೊರೆತ ಹೆಚ್ಚುತ್ತಿದೆ. ರಸ್ತೆಗಳ ಮೇಲೆ ಕಡಲ ಅಲೆಗಳು ಅಪ್ಪಳಿಸುತ್ತಿದ್ದು, ರಸ್ತೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಹಲವು ಮನೆಗಳು ಅಪಾಯದಲ್ಲಿದ್ದು, ಕಡಲ ತೀರದ ಜನತೆ ಆತಂಕದಲ್ಲಿದ್ದಾರೆ.