ಉಡುಪಿ: ಒಂದು ಕಡೆ ಪಾಪನಾಶಿನಿ ನದಿ, ಇನ್ನೊಂದು ಕಡೆ ಅರಬ್ಬಿ ಸಮುದ್ರದಿಂದ ಸುತ್ತುವರೆದಿರುವ ದ್ವೀಪ. ಇದು ಉಡುಪಿಯ ಮಲ್ಪೆಯ ಪಡುಕೆರೆ ಬೀಚ್ನ ಸುಂದರ ದೃಶ್ಯ. ಈ ದ್ವೀಪವನ್ನು ಬಳಸಿಕೊಂಡು ಸುಮಾರು 800 ಕೋಟಿ ವೆಚ್ಚದಲ್ಲಿ ಮರೀನಾ ನಿರ್ಮಾಣಕ್ಕೆ ಜಿಲ್ಲಾಡಳಿತ ಉತ್ಸುಕವಾಗಿದೆ. ಈ ಬಗ್ಗೆ ಪುಣೆಯ ಸಿಡಬ್ಲ್ಯೂಪಿಆರ್ಎಸ್ (CWPRS) ಸಂಸ್ಥೆಗೆ ಸಾಧ್ಯತಾ ವರದಿಯನ್ನು ತಯಾರಿಸಲು ಆದೇಶ ನೀಡಲಾಗಿದೆ.
ಸಮುದ್ರ ಮಾರ್ಗದಲ್ಲಿ ದಿನಗಟ್ಟಲೇ ಪ್ರಯಾಣ ಮಾಡುವ ಬೃಹದ್ಗಾತ್ರದ ಹಡಗುಗಳು, ನಾಗರಿಕ ಸರಬರಾಜು ನೌಕೆಗಳಿಗೆ ಕೆಲಕಾಲ ತಂಗಲು ಇರುವ ತಂಗುದಾಣವೇ ಮರೀನಾ. ಇಲ್ಲಿ ನೌಕೆಗಳನ್ನು ದುರಸ್ತಿ ಮಾಡಲು ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಉಳಿದುಕೊಳ್ಳಲು ತೇಲುವ ಹೋಟೆಲ್, ರೆಸ್ಟೋರೆಂಟ್, ಐಷಾರಾಮಿ ಲಾಡ್ಜ್ಗಳು, ಅಂತರಾಷ್ಟ್ರೀಯ ಮಟ್ಟದ ಮನೋರಂಜನಾ ಕೇಂದ್ರಗಳು, ವೈವಿಧ್ಯಮಯ ಮಳಿಗೆಗಳು ಮತ್ತು ವಸತಿ ಗೃಹಗಳು ತಲೆಯೆತ್ತಲಿವೆ. ಒಟ್ಟಿನಲ್ಲಿ ಇದೊಂದು ಕಡಲಿನ ಮಧ್ಯದಲ್ಲಿ ತೇಲುವ ಐಷಾರಾಮಿ ನಗರವೆಂದರೆ ತಪ್ಪಾಗದು.
ಇಂತಹ ಮರೀನಾ ನಿರ್ಮಾಣಕ್ಕೆ ಪಡುಕೆರೆ ಬೀಚ್ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ತಜ್ಞರು. ಇಲ್ಲಿಗೆ ಸ್ವಲ್ಪ ದೂರದಲ್ಲೇ ಸಮುದ್ರದ ನಡುವೆ ಮಾಲತಿ ಎಂಬ ದ್ವೀಪವಿದ್ದು, ಇಲ್ಲಿರುವ ಸಾಲು ದ್ವೀಪಗಳನ್ನು ಜೋಡಿಸಿದರೆ ಸಮುದ್ರದ ಭೋರ್ಗರೆತವನ್ನು ತಗ್ಗಿಸಬಹುದು. ಇದಲ್ಲದೆ ಪ್ರಾಕೃತಿಕವಾಗಿ ಪಡುಕೆರೆ ಬೀಚ್ ಆಳವಾಗಿರುವುದರಿಂದ ಬೃಹತ್ ಗಾತ್ರದ ಶಿಫ್ಟ್ಗಳನ್ನು ಲಂಗರು ಹಾಕುವುದಕ್ಕೆ ಪಡುಕೆರೆ ಪ್ರಶಸ್ತ ಸ್ಥಳ ಎನ್ನುತ್ತಿದೆ ಜಿಲ್ಲಾಡಳಿತ. ಆದರೆ ಜಿಲ್ಲಾಡಳಿತದ ಈ ಯೋಜನೆಗೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಈ ಬೃಹತ್ ಯೋಜನೆಯಿಂದ ಜನಜೀವನ ನಾಶವಾಗಲಿದ್ದು, ಸಾವಿರಾರು ವಿದೇಶಿಯರ ಆಗಮನದಿಂದ ಪರಿಸರ ನಾಶ ಮತ್ತು ಸಾಂಸ್ಕೃತಿಕ ಏರುಪೇರುಗಳು ಉಂಟಾಗಲಿವೆ. ಯೋಜನೆಯಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ನಮ್ಮ ದ್ವೀಪದ ಶಾಂತಿಯುತ ಬದುಕನ್ನು ಕದಡಬೇಡಿ ಎನ್ನುತ್ತಿದ್ದಾರೆ ಮೀನುಗಾರರು.
ಅರಬ್ಬಿ ಸಮುದ್ರದಲ್ಲಿ ಪ್ರತಿ ವರ್ಷ 4,000ಕ್ಕೂ ಅಧಿಕ ಬೃಹತ್ ಗಾತ್ರದ ಹಡಗುಗಳು ಸಂಚರಿಸುತ್ತಿದ್ದು, ಅವುಗಳ ನಿಲುಗಡೆಗೆ ಸುರಕ್ಷಿತವಾದ ಮರೀನಾ ಭಾರತದಲ್ಲಿ ಇಲ್ಲ. ಕೊಚ್ಚಿಯಲ್ಲಿ ಸಣ್ಣಪ್ರಮಾಣದ ಮರೀನಾ ಇದ್ದರೂ ಅಲ್ಲಿ ಭಾರೀ ಗಾತ್ರದ ಹಡಗುಗಳು ನಿಲುಗಡೆಯಾಗುವುದಿಲ್ಲ. ಹೀಗಾಗಿ ನಾಲ್ಕು ಕಿ.ಮೀ. ಉದ್ದದ ಮರೀನಾ ಸ್ಥಾಪನೆಗೆ ಪಡುಕೆರೆಯನ್ನು ಆಯ್ಕೆ ಮಾಡಲಾಗಿದೆ.