ಉಡುಪಿ: ಶ್ರೀಲಂಕಾದಲ್ಲಿ ಭಾನುವಾರ ಪವಿತ್ರ ಈಸ್ಟರ್ ವೇಳೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಜೆಡಿಎಸ್ನ 7 ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಇದರಿಂದ ಆಘಾತಕ್ಕೊಳಗಾಗಿರುವ ಸಿಎಂ ಕುಮಾರಸ್ವಾಮಿ ಆಯುರ್ವೇದಿಕ್ ಚಿಕಿತ್ಸೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.
ಕಾರ್ಯಕರ್ತರ ದಾರುಣ ಸಾವಿಗೆ ಮೊನ್ನೆಯಷ್ಟೆ ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದ ಸಿಎಂ, ಇದೀಗ ತಮ್ಮ ಚಿಕಿತ್ಸೆಯನ್ನೂ ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಆರೋಗ್ಯ ಸುಧಾರಿಸಲು ಉಡುಪಿಗೆ ಬಂದಿದ್ದೆ. ಆದರೆ, ಶ್ರೀಲಂಕಾದ ಸ್ಫೋಟ ಪ್ರಕರಣ ನನ್ನನ್ನು ಘಾಸಿಗೊಳಿಸಿದೆ. ನಿನ್ನೆಯಿಂದ ತಲೆಯಲ್ಲಿ ಇದೇ ಕಾಡುತ್ತಿದೆ. ನನ್ನ ಆತ್ಮೀಯರು ಮರಣ ಹೊಂದಿದ್ದಾರೆ. ಮೂರ್ನಾಲ್ಕು ದಿನ ಕಾಪುವಿನಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪಡೆಯಬೇಕೆಂದಿದ್ದೆ. ಆದರೆ, ನಿನ್ನೆಯಿಂದ ನನಗೆ ನೋವು ತಡೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ಕರ್ತವ್ಯಕ್ಕೆ ಮರಳುತ್ತಿದ್ದೇನೆ ಎಂದರು.
ಈ ಬಗ್ಗೆ ನಾನು ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ. 27ರ ನಂತರ ಉಡುಪಿಗೆ ಬರಲು ಸೂಚಿಸಿದ್ದಾರೆ. ಈಗ ಕರ್ತವ್ಯಕ್ಕಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದಿರುವ ಸಿಎಂ, ದುಃಖದಿಂದ ಬೆಂಗಳೂರಿಗೆ ಮರಳಿದ್ದಾರೆ. ಸಿಎಂ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಲಂಕಾ ಸ್ಫೋಟದ ಹಿನ್ನೆಲೆಯಲ್ಲಿ ಚಿಕಿತ್ಸೆ ಮೊಟಕುಗೊಳಿಸಿದ್ದಾರೆ.