ಉಡುಪಿ: ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆದಿತ್ಯ ರಾವ್, ತನ್ನ ಕೃತ್ಯಕ್ಕೆ ಫೈನಲ್ ಟಚ್ ಕೊಟ್ಟಿದ್ದು ಕಾರ್ಕಳದಲ್ಲಿ ಎಂಬ ಅಂಶ ಸಿಸಿಟಿವಿ ದೃಶ್ಯದ ಮೂಲಕ ಬೆಳಕಿಗೆ ಬಂದಿದೆ.
ಬಾಂಬ್ ಇಡುವುದಕ್ಕಿಂತ ಮುಂಚೆ ಅಂದ್ರೆ ಜನವರಿ 20 ರಂದು ಆದಿತ್ಯ ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲಿನಲ್ಲಿ ತಂಗಿದ್ದ ಸಿಸಿಟಿವಿ ದೃಶ್ಯಗಳು ಇದೀಗ ಲಭ್ಯವಾಗಿದೆ.
ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲ್‌ನಲ್ಲಿ ಶನಿವಾರ ಅಡುಗೆ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ ಆದಿತ್ಯ, ಎರಡು ದಿನ ಕೆಲಸ ಮಾಡಿ ಹೋಟೆಲ್ ನಿಂದ ನಾಪತ್ತೆಯಾಗಿದ್ದ. ಹೋಟೆಲ್ ನಲ್ಲಿ ತಂಗಿದ ಮೂರು ದಿನದಲ್ಲಿ ಟೇಬಲ್ ಕ್ಲೀನಿಂಗ್, ಅಡುಗೆಗೆ ಸಹಾಯ ಮಾಡಿದ್ದಾನೆ. ಕೆಲಸ ಮಾಡಿ ತಂಗಿದ್ದ ರೂಮಿನಲ್ಲಿ ಬಾಂಬ್ ತಯಾರಿಗೆ ಫೈನಲ್ ಟಚ್ ಕೊಟ್ಟಿದ್ದಾನೆ ಎನ್ನಲಾಗಿದೆ.
ಬಾಂಬ್ ಇರಿಸಿದ ಹಿಂದಿನ ದಿನ ಇಡೀ ರಾತ್ರಿ ಮಲಗದ ಆದಿತ್ಯ, ಬರಿ ಮೈಯಲ್ಲೇ ಹೋಟೆಲ್ ಹೊರಗಡೆ ಅಡ್ಡಾಡುತ್ತಿದ್ದ ಎಂಬ ಅಂಶ ಸಿಸಿಟಿವಿ ದೃಶ್ಯದಿಂದ ಬೆಳಕಿಗೆ ಬಂದಿದೆ. ಪೊಲೀಸರ ನಿದ್ದೆಗೆಡಿಸುವ ಮೊದಲು ತಾನೇ ನಿದ್ದೆ ಬಿಟ್ಟಿದ್ದ. ಇನ್ನು 20ನೇ ತಾರೀಖು ಮುಂಜಾನೆ ನಾಲ್ಕು ಗಂಟೆಯ ಆದಿತ್ಯನ ಎಕ್ಸ್‌ಕ್ಲೂಸಿವ್ ದೃಶ್ಯ ಲಭ್ಯವಾಗಿದೆ.
ಶನಿವಾರ ಕೆಲಸ ಕೇಳಿಕೊಂಡು ಸಂಜೆ ಏಳು ಗಂಟೆಗೆ ಬಂದಿದ್ದ. ಅವನ ಆಧಾರ್ ಕಾರ್ಡ್ ಪಡೆದುಕೊಂಡು ಆತನಿಗೆ ಕೆಲಸ ನೀಡಿದ್ದೆವು. ಭಾನುವಾರ ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದಾನೆ. ಸೋಮವಾರ ಬೆಳಗ್ಗೆ 4ಗಂಟೆಗೆ ಇಲ್ಲಿಂದ ತೆರಳಿದ್ದಾನೆ. ಶನಿವಾರ ಆತ ಹೋಟೆಲ್ಗೆ ಬರುವಾಗ ಅವನ ಕೈಯಲ್ಲಿ ಒಂದು ಬ್ಯಾಗ್ ಇತ್ತು. ಎರಡು ರಾತ್ರಿ ನಮ್ಮ ಸಿಬ್ಬಂದಿ ಕೋಣೆಯಲ್ಲಿಯೇ ತಂಗಿದ್ದ. ಒಂದೂವರೆ ದಿನವಷ್ಟೇ ನಮ್ಮಲ್ಲಿ ಕೆಲಸ ಮಾಡಿದ್ದಾನೆ. ಯಾವುದೇ ಸಂಬಳ ಕೇಳಿಲ್ಲ ಎಂದು ಕಿಂಗ್ಸ್ ಕೋರ್ಟ್ ಹೋಟೆಲ್ ಮಾಲೀಕ ಅಶೋಕ್ ಶೆಟ್ಟಿ ಮಾಹಿತಿ ನೀಡಿದ್ದಾರೆ.