ಉಡುಪಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಉದ್ದಟತನದಿಂದ ಕೂಡಿದೆ. ಇದು ಭಾರತೀಯ ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: ಠಾಕ್ರೆ ಉದ್ಧಟತನದ ಬಗ್ಗೆ ವಿಚಾರ ಮಾಡ್ತಾರಂತೆ ಸಂಸದ ಅನಂತ್‌ಕುಮಾರ್ ಹೆಗಡೆ
ಗಡಿ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ ಎಂದು ಎಲ್ಲರಿಗೂ ಗೊತ್ತಿದೆ. ಆದರೂ ಮತ್ತೆ ಮತ್ತೆ ಕೆದಕುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರು ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದತೆಯಿಂದ ಇದ್ದಾರೆ. ಆದರೆ, ಆ ವಾತಾವರಣ ಕೆಡಿಸುವ ಕೆಲಸ ಮಾಡಬೇಡಿ, ಅಶಾಂತಿ ಮೂಡಿಸುವ ಪ್ರಯತ್ನ ನಿಮಗೆ ಗೌರವ ತರುವ ಕೆಲಸವಲ್ಲ ಎಂದು ಹೇಳಿದರು.
ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಥರದ ಹೇಳಿಕೆಗಳು ಸಹಜವಾಗಿಯೇ ಕನ್ನಡಿಗರಲ್ಲಿ ಆಕ್ರೋಶ ಮೂಡಿಸುತ್ತದೆ. ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡುತ್ತೇನೆ. ನಾವೆಲ್ಲರೂ ಒಂದಾಗಿ ಒಟ್ಟಾಗಿ ಹೋಗೋಣ ಎಂದು ವಿನಂತಿಸಿದರು.