ಉಡುಪಿ: ಇಲ್ಲಿನ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುವ ಆಶಾಭಾವನೆ ಹೊಂದಿದ್ದ ರೈತರಿಗೆ ಆಲೆಮನೆ ಘಟಕ ತೆರೆದಿರುವುದು ಸಂತಸ ಮೂಡಿಸಿದೆ. ಸಕ್ಕರೆ ಕಾರ್ಖಾನೆ ಬಾಗಿಲು ಹಾಕಿದ ಬಳಿಕ ಕಬ್ಬು ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಾ ಸಾಗಿತ್ತು.
ಆದರೆ ಈಗ 18 ವರ್ಷದಿಂದ ಬಂದ್ ಆಗಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುವ ನಿರೀಕ್ಷೆ ಹೆಚ್ಚಾಗಿದ್ದು, ಇದಕ್ಕೆ ಪೂರಕ ತಯಾರಿ ಎನ್ನುವಂತೆ ಆಡಳಿತ ಮಂಡಳಿ ಆಲೆಮನೆ ಘಟಕ ಆರಂಭಿಸಿರುವುದು ಸಂತಸ ಮೂಡಿಸಿದೆ.
ಮುಂದೆ ಸಕ್ಕರೆ ಕಾರ್ಖಾನೆ ಆರಂಭವಾದಾಗ ಕಬ್ಬಿನ ಕೊರತೆ ಎದುರಾಗಬಾರದು ಎಂಬ ಕಾರಣದಿಂದಾಗಿ ಈಗಿನಿಂದಲೇ ಕಬ್ಬು ಬೆಳೆಗೆ ರೈತರು ಉತ್ಸಾಹ ತೋರಬೇಕೆಂದು ಸಕ್ಕರೆ ಕಾರ್ಖಾನೆ ಅಂಗಳದಲ್ಲೇ ಶುದ್ಧ ಬೆಲ್ಲ ತಯಾರಿಸುವ ಆಲೆಮನೆ ತೆರೆದಿದೆ. ಈ ಆಲೆಮನೆಗೆ ಸ್ಥಳೀಯ ರೈತರೇ ಕಬ್ಬು ಒದಗಿಸುತ್ತಿದ್ದು, ಶುದ್ಧ ಬೆಲ್ಲ ಘಮಗುಟ್ಟುತ್ತಿದೆ.
ಶುದ್ಧ ಬೆಲ್ಲಕ್ಕೆ ಭಾರಿ ಡಿಮ್ಯಾಂಡ್ ಶುರುವಾಗಿದೆ. ನೂರಾರು ಜನರು ಆಲೆಮನೆ ನೋಡುವುದಕ್ಕೆ ಕುತೂಹಲದಿಂದ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಬಿಪಿಎಲ್ಗೆ ಮಾನದಂಡ ರೂಪಿಸುವಾಗ ಆದಾಯ ಮಿತಿ ಬದಲಾವಣೆ ಮಾಡಿ: ಯು.ಟಿ. ಖಾದರ್ ಒತ್ತಾಯ