ಉಡುಪಿ: "ಬಹಳ ದೊಡ್ಡ ಕಾರ್ಯಕರ್ತ ವರ್ಗ ಹಾಗೂ ತನ್ನದೇ ವಿಚಾರಧಾರೆಯಿರುವ ದೇಶದ ಏಕೈಕ ಪಕ್ಷ ಬಿಜೆಪಿ. ಎಲ್ಲಾ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್ನಲ್ಲಿ ಕುಟುಂಬವೇ ರಾಜಕಾರಣ ಮಾಡುತ್ತಿದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದರು. ಇದೇ ವೇಳೆ ಕೇಂದ್ರದ ಯೋಜನೆಗಳನ್ನು ಕೊಂಡಾಡಿದ ಅವರು, "ಇಂದು ನಾವು ಮಾಸ್ಕ್ ಹಾಕದೇ ಅಕ್ಕಪಕ್ಕ ಕುಳಿತು ಸಂತೋಷ ಪಡುವುದಕ್ಕೆ ಪ್ರಧಾನಿ ಮೋದಿ ಕಾರಣ" ಎಂದು ಹೇಳಿದ್ದಾರೆ.
ಉಡುಪಿಗೆ ಬೇಟಿ ನೀಡಿ ಮಾತನಾಡಿದ ಅವರು, "ಉಡುಪಿಗೆ ಬಂದಿದ್ದು ಹೆಮ್ಮೆ ಅನಿಸಿದೆ. ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇನೆ. ಭಾರತೀಯ ಜನತಾ ಪಕ್ಷದ ಇತಿಹಾಸದಲ್ಲಿ ಉಡುಪಿಗೆ ವಿಶೇಷ ಸ್ಥಾನವಿದೆ. ಬಿಜೆಪಿಗೆ ಯಶಸ್ಸು ಮತ್ತು ಸಾರ್ವಜನಿಕ ಬೆಂಬಲ ಸಿಕ್ಕಿದ್ದು ಮೊದಲ ಬಾರಿಗೆ ಉಡುಪಿಯಲ್ಲಿ ಎಂದರು. ಮುಂದುವರೆದು ಮಾತನಾಡಿ, ನನಗೆ ಮತ್ತು ವಿ.ಎಸ್.ಆಚಾರ್ಯರಿಗೆ 25-30 ವರ್ಷಗಳ ಅಂತರವಿತ್ತು. ಆದರೆ, ಅವರ ಜೊತೆ ಹಲವು ಬಾರಿ ಕೆಲಸ ಮಾಡಿದ್ದೆ. ವಿ.ಎಸ್.ಆಚಾರ್ಯ ಓರ್ವ ಪ್ರಮಾಣಿಕ ಮತ್ತು ಸರಳ, ಶುದ್ದ ರಾಜಕಾರಣಿ" ಎಂದು ಹೇಳಿದರು.
ಫೆ.6ರಂದು ಮೋದಿ ಎಚ್ಎಎಲ್ ಹೆಲಿಕಾಫ್ಟರ್ ಘಟಕ ಉದ್ಘಾಟಿಸಿದರು. ಇದು ಕರ್ನಾಟಕದ ಇತಿಹಾಸದಲ್ಲಿ ಹೊಸ ಕ್ರಾಂತಿಯಾಗಲಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ರಾಜ್ಯದ ಮೂಲೆಮೂಲೆ ತಲುಪಿದ್ದಾರೆ. ಎಲ್ಲಾ ಜಾತಿ-ಧರ್ಮಕ್ಕೆ ರಾಜ್ಯ ಮತ್ತು ಕೇಂದ್ರದ ಯೋಜನೆಗಳನ್ನು ತಲುಪಿಸಿದ್ದಾರೆ. ಬೂತ್ನ ಅಂತಿಮ ವ್ಯಕ್ತಿಯವರೆಗೆ ನೀವು ತಲುಪಬೇಕು. ಈ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಡ್ಡಾ, ಅಮೆರಿಕದಲ್ಲಿ ಕೇವಲ ಶೇ 70ರಷ್ಟು ವ್ಯಾಕ್ಸಿನ್ ನೀಡಲಾಗಿದೆ. ಆದರೆ, ನಮ್ಮಲ್ಲಿ ಯಾರೂ ಮಾಸ್ಕ್ ಹಾಕಲ್ಲ. ಅಕ್ಕಪಕ್ಕ ಕೂತು ಸಂತೋಷ ಪಡುತ್ತೇವೆ. ಮೋದಿ ಅವರು ನಮಗೆಲ್ಲರಿಗೂ ಡಬಲ್ ಡೋಸ್ ಲಸಿಕೆ ಕೊಟ್ಟಿದ್ದಾರೆ.
220 ಕೋಟಿ ಲಸಿಕೆ ನೀಡಿದ್ದಾರೆ. ಕಾಂಗ್ರೆಸ್ನವರು ನಾವು ಪ್ರಯೋಗ ಪಶುಗಳಲ್ಲ, ನಮಗೆ ಲಸಿಕೆ ಬೇಡ ಎಂದು ಹೇಳಿದ್ದರು. ಕದ್ದು ಮುಚ್ಚಿ ಹೋಗಿ ಲಸಿಕೆ ಪಡೆದಿದ್ದರು ಎಂದು ವ್ಯಂಗ್ಯವಾಡಿದರು.
ರಷ್ಯಾ ಮತ್ಯು ಉಕ್ರೇನ್ ಎರಡೂ ಕಡೆ ಮಾತನಾಡಿ ಯುದ್ಧ ನಿಲ್ಲಿಸಿದವರು ಮೋದಿ. ಸಾವಿರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಸಿದ್ದರಾಮಯ್ಯ ಕಾಲದಲ್ಲಿ ವಿದ್ಯುತ್ ಕೊರತೆ, ಪವರ್ ಕಟ್ ಸಮಸ್ಯೆ ಇತ್ತು. ಈಗ ಕಾಂಗ್ರೆಸ್ ಪವರ್ ಕಟ್ ಆಗಿದೆ. ಭಾರತ ಎನರ್ಜಿ ಕನ್ಸಮ್ಶನ್ (ಶಕ್ತಿಯ ಬಳಕೆ) ಮೇಲೆ ಮೂರನೇ ಸ್ಥಾನದಲ್ಲಿದೆ. ಮರುಬಳಕೆ ಮಾಡಬಹುದಾದ ಇಂಧನ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಕೇವಲ ಶೇಕಡಾ 3 ಇತ್ತು. ಈಗ ಪ್ರಪಂಚದ ಶೇ 40 ವಹಿವಾಟು ದೇಶದಲ್ಲಿ ಆಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'ಸೋಗಾನೆ ವಿಮಾನ ನಿಲ್ದಾಣದ ಉದ್ಘಾಟನೆಗೆ ಮೊದಲೇ ಸಂತ್ರಸ್ತರಿಗೆ ಪರಿಹಾರ ಒದಗಿಸಿ'