ಉಡುಪಿ: ಜಿಲ್ಲೆಯ ಬೆಳ್ಳಂಪಳ್ಳಿ ಮೂಲದ ಮಿಸ್ ಇಂಡಿಯಾ ಸಿನಿ ಶೆಟ್ಟಿಗೆ ತವರೂರಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮಿಸ್ ಇಂಡಿಯಾ ಆಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ ಸಿನಿ ಶೆಟ್ಟಿಯನ್ನು ನಗರದ ಜೋಡು ಕಟ್ಟೆ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಅಭಿಮಾನಿಗಳು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಬರಮಾಡಿಕೊಂಡರು.
ತಂದೆ ಸದಾನಂದ ಶೆಟ್ಟಿ, ತಾಯಿ ಹೇಮ ಶೆಟ್ಟಿ ಜೊತೆಗೆ ಮೆರವಣಿಗೆಯಲ್ಲಿ ಆಗಮಿಸಿದ ಊರ ಮಗಳನ್ನು ನಗರದ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಂಟರ ಸಂಘದಿಂದ ಸನ್ಮಾನಿಸಲಾಯಿತು. ಸಭಾಂಗಣದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮಿಸ್ ಇಂಡಿಯಾ ಅಜ್ಜಿಯನ್ನು ಕಂಡು ಭಾವುಕರಾದರು.
ಅಜ್ಜಿಯನ್ನು ಬಿಗಿದಪ್ಪಿಕೊಂಡು, ಮಾತನಾಡಿಸಿದ ಸಿನಿ ಶೆಟ್ಟಿ, ನನ್ನ ಬಾಲ್ಯದಿಂದಲೂ ಅಜ್ಜಿ ನನಗೆ ಬೆಂಬಲವಾಗಿದ್ದರು. ನಾನು ಎಲ್ಲೇ ಹೋದರು ಯಾವುದೇ ಉಡುಗೆ ತೊಟ್ಟರೂ ನನಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರು ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಅಜ್ಜಿ ನನಗೆ ತುಂಬಾ ಪ್ರೇರೇಪಣೆ ನೀಡುತ್ತಿದ್ದರು. ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ. ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ಸಂತೋಷವಾಗಿದೆ.
ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ. ಕಟೀಲು ದೇವಿಯ ದರ್ಶನ ಮಾಡಿ ಬಂದಿದ್ದೇನೆ. ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ಮಾತನಾಡಬೇಕು. ಈಗಾಗಲೇ ನಾನು ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅನೇಕ ಸಾಮಾಜಿಕ ಕಾರ್ಯ ಮಾಡುವ ಉತ್ಸಾಹವಿದೆ. ಮಿಸ್ ಇಂಡಿಯಾ ಪುಟದಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಅಂತಾ ಸಿನಿ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮೂರಿನ ಹುಡುಗಿ ಸೀನಿ ಶೆಟ್ಟಿ ಮಿಸ್ ಇಂಡಿಯಾ ಆಗಿರುವುದಕ್ಕೆ ಶುಭಾಶಯ ತಿಳಿಸಲು ಬಂದಿದ್ದೇನೆ. ಮೊದಲು ಮಿಸ್ ವರ್ಲ್ಡ್ ಗೆ ಗ್ಲಾಮರ್ ಕೊಟ್ಟಿದ್ದು, ನಮ್ಮ ರಾಜ್ಯದ ಐಶ್ವರ್ಯ ರೈ. ಸಿನಿ ಶೆಟ್ಟಿ ಕೂಡ ಮುಂದೆ ಮಿಸ್ ವರ್ಲ್ಡ್ ಆಗುವ ಎಲ್ಲ ಸಾಧ್ಯತೆ ಇದೆ. ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ನಟಿಯರು ಉಡುಪಿ ಮಂಗಳೂರು ಭಾಗದವರು.
ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ಶ್ರೀನಿಧಿ ಸೇರಿದಂತೆ ಹಲವು ನಟಿಯರು ಕರಾವಳಿ ಭಾಗದವರು. ಕರಾವಳಿಯ ಯುವತಿಯರು ಈ ರೀತಿ ಹೆಸರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಅಂತಾ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅಭಿಪ್ರಾಯ ಪಟ್ಟರು.
ಇದನ್ನೂ ಓದಿ: ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಬಾಲಿವುಡ್ನಲ್ಲಿ ನಟಿಸುವೆ: ಮಿಸ್ ಇಂಡಿಯಾ ಸಿನಿ ಶೆಟ್ಟಿ
ನಮ್ಮೂರಲ್ಲಿ ನಮಗೆ ಈ ರೀತಿ ಸ್ವಾಗತ ಸಿಗುತ್ತೆ ಎಂದು ಎಣಿಸಿರಲಿಲ್ಲ. ಉಡುಪಿ ಜನತೆಯನ್ನ ನೋಡುವಾಗ ಹೆಮ್ಮೆ ಎನಿಸುತ್ತದೆ. ಬೆಳ್ಳಂಪಳ್ಳಿಯಲ್ಲಿರುವ ನಮ್ಮ ಮನೆಯ ದೈವ ಸ್ಥಾನಕ್ಕೆ ಭೇಟಿ ನೀಡಲಿದ್ದೇವೆ. ಕಲ್ಕುಡ ಹಾಗೂ ಪಂಜುರ್ಲಿ ದೈವಕ್ಕೆ ಮಗಳ ಜೊತೆ ಹೋಗುತ್ತೇವೆ ಅಂತಾ ಮಿಸ್ ಇಂಡಿಯಾ ಸಿನಿ ಶೆಟ್ಟಿ ತಂದೆ ಸದಾನಂದ ಮಾಧ್ಯಮದವರ ಜೊತೆ ಸಂತಸ ಹಂಚಿಕೊಂಡರು.