ಉಡುಪಿ: ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಕಾರಣ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ನೆರೆ ಪರಿಹಾರಕ್ಕೆ ಕೂಡಲೇ ಕರಾವಳಿ ಜಿಲ್ಲೆಗಳಿಗೆ ತುರ್ತು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮಳೆ ಹಾನಿ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಮಳೆಗೆ ರಾಜ್ಯದಲ್ಲಿ 32 ಜೀವ ಹಾನಿಯಾಗಿದೆ. 5 ಜನ ಕಾಣೆಯಾಗಿದ್ದಾರೆ. 34 ಮಂದಿ ಗಾಯಗೊಂಡಿದ್ದಾರೆ. ಸುಮಾರು 300 ಜನರನ್ನು ರಕ್ಷಿಸಲಾಗಿದೆ. ನಾಲ್ಕು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಕೆಲಸ ಮಾಡುತ್ತಿವೆ ಎಂದರು.
ಕರಾವಳಿಯಲ್ಲಿ ಮಳೆಯಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 355 ಹೆಕ್ಟೇರ್ ತೋಟ, ಬೆಳೆ ನಾಶವಾಗಿದೆ. ದಕ್ಷಿಣ ಕನ್ನಡದಲ್ಲಿ 429 ಮನೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 437, ಉಡುಪಿಯಲ್ಲಿ 196 ಸೇರಿ 1,062 ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 727 ಕಿ.ಮೀ, ಉತ್ತರ ಕನ್ನಡ 500 ಕಿ.ಮೀ, ಉಡುಪಿ 960 ಕಿ.ಮೀ ಸೇರಿ 2,187 ಕಿ.ಮೀ ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ರಸ್ತೆಗಳು ಹಾನಿಗೊಳಗಾಗಿವೆ. 5,000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. 168 ಸೇತುವೆಗಳಿಗೆ ಹಾನಿಯಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಭೂಕಂಪನ, ಭೂಕುಸಿತದ ಕುರಿತು ಅಮೃತ ವಿವಿಯವರು ಅಧ್ಯಯನ ಮಾಡುತ್ತಿದ್ದಾರೆ. ವರದಿ ಬಂದ ಕೂಡಲೇ ಸರ್ಕಾರ ಪರಿಹಾರ ನೀಡಲು ಸಿದ್ಧವಿದೆ. ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ರೂ ಖರ್ಚಾಗಿದೆ. ಕೇರಳ ಮಾದರಿಯಲ್ಲಿ ಒಂದು ಕಿಲೋಮೀಟರ್ ಕಡಲಿಗೆ ತಡೆಗೋಡೆ ನಿರ್ಮಾಣ ಮಾಡುವ ಚಿಂತನೆ ಇದೆ. ತಡೆಗೋಡೆ ನಿರ್ಮಾಣ ಸಂಬಂಧ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು. ಸರಿಯಾದ ಅಧ್ಯಯನ ಮಾಡಿ ಅನುಷ್ಟಾನ ಮಾಡಲು ತೀರ್ಮಾನ ಮಾಡಲಾಗುವುದು. ಶಾಶ್ವತ ಪರಿಹಾರಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 'ಮಹಾ' ಮಳೆಗೆ 89 ಮಂದಿ ಬಲಿ: ತೆಲಂಗಾಣದಲ್ಲೂ 10ಕ್ಕಿಂತ ಹೆಚ್ಚು ಜನ ಸಾವು