ಉಡುಪಿ : ಕರಾವಳಿಯ ಬಹುತೇಕ ದೇವಾಲಯಗಳಲ್ಲಿ ಅಯ್ಯಪ್ಪ ವ್ರತಧಾರಿಯಾದ ವೃದ್ಧೆಯೊಬ್ಬರು 'ಭಿಕ್ಷಾಂದೇಹಿ' ಎಂದು ಕೇಳುವುದನ್ನು ಕಂಡು ಕೆಲವರು ಹಣ ನೀಡಿ ಆಕೆಯನ್ನು ಯಾರೋ ಭಿಕ್ಷುಕಿ ಎಂದು ಮರೆತು ಬಿಡುತ್ತಾರೆ. ಆದರೆ, ಯಾವ ಧನಿಕನಿಗೂ ಇಲ್ಲದ ಹೃದಯ ಶ್ರೀಮಂತಿಕೆ ಈ ವೃದ್ದೆಗೆ ಇದೆ ಅನ್ನೋದು ಈಗ ಸಾಬೀತಾಗಿದೆ.
ನೂರಲ್ಲ.. ಸಾವಿರವಲ್ಲ.. ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಈಕೆ ಸಾಲಿಗ್ರಾಮದ ಗುರುನರಸಿಂಹ ದೇವರ ಸನ್ನಿಧಾನಕ್ಕೆ ದೇಣಿಗೆ ನೀಡಿದ್ದಾರೆ. ದೇವಸ್ಥಾನದ ಅನ್ನಸಂತರ್ಪಣೆಗೆ ಈ ಹಣವನ್ನು ಬಳಸಿಕೊಳ್ಳುವಂತೆ ಕೋರಿದ್ದಾರೆ. ಭಿಕ್ಷೆ ಬೇಡಿದ ಹಣವನ್ನು ದೇವರಿಗೆ ಸಮರ್ಪಿಸುವ ಈಕೆಯ ಹೃದಯ ವೈಶಾಲ್ಯತೆ ಕಂಡು ಜನ ಬೆಕ್ಕಸ ಬೆರಗಾಗಿದ್ದಾರೆ.
ಅಯ್ಯಪ್ಪ ಭಕ್ತೆಯಾದ ಈ ವೃದ್ಧೆಯ ಹೆಸರು ಅಶ್ವತ್ಥಮ್ಮ. ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಇವರು, ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಟೋಲ್ ಗೇಟ್ನಲ್ಲಿ ಜನರಿಂದ ಹಣ ಕೇಳಿ ಪಡೆದು ಸಂಗ್ರಹಿಸುತ್ತಾರೆ. ಮಾಮೂಲಾಗಿ ಭಿಕ್ಷುಕರಿಗೆ ನೀಡುವಂತೆ ಈಕೆಗೂ ಎಲ್ಲರೂ ಹಣ ನೀಡುತ್ತಾರೆ. ಆದರೆ, ಹೀಗೆ ಸಂಗ್ರಹವಾದ ಹಣದಲ್ಲಿ ಈ ಅಜ್ಜಿ ಸುಮಾರು ಐದು ಲಕ್ಷಕ್ಕೂ ಅಧಿಕ ಹಣವನ್ನು ದಾನವಾಗಿ ವಿವಿಧ ದೇವಾಲಯಗಳಿಗೆ ಕೊಟ್ಟಿದ್ದಾರೆ.
ಮೊದಲು ತನ್ನೂರು ಕಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.5ಲಕ್ಷ ರೂ. ದೇಣಿಗೆಯೊಂದಿಗೆ ಈ ದಾನ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ಅನ್ನದಾನ ನಡೆಸಲಾಗಿದೆ. ಅಯ್ಯಪ್ಪ ಸ್ವಾಮಿ ಬೆಳೆದ ಸ್ಥಳವಾದ ಪಂದಳ ಕ್ಷೇತ್ರದಲ್ಲಿ 30 ಸಾವಿರ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ. ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ ಕಾಣಿಕೆ ಸಮರ್ಪಿಸಿದ್ದಾರೆ.
ಗುರುವಾರ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ 1ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದಾರೆ. ತನ್ನ ವೈಯಕ್ತಿಕ ಖರ್ಚಿಗೆ ಸ್ವಲ್ಪ ಹಣ ಇರಿಸಿಕೊಂಡು ಉಳಿದೆಲ್ಲವನ್ನು ದಾನ ಮಾಡುತ್ತಾ ಬಂದಿದ್ದಾರೆ. ಕೊರೊನಾದಿಂದ ದೇಶ ಮುಕ್ತವಾಗಲಿ, ಶಬರಿಮಲೆಗೆ ಕವಿದಿರುವ ಕತ್ತಲು ದೂರವಾಗಲಿ ಎಂದು ಹರಕೆಯನ್ನೂ ಹೊತ್ತಿದ್ದಾರೆ.
ಪತಿ ಹಾಗೂ ಪುತ್ರ ತೀರಿಕೊಂಡ ನಂತರ ಇವರು ಈ ಹಣ ಸಂಗ್ರಹ ಕೆಲಸ ಆರಂಭಿಸಿದ್ದಾರೆ. ಈ ಅಜ್ಜಿಗೆ ಆರು ಮಂದಿ ಮೊಮ್ಮಕ್ಕಳೂ ಇದ್ದಾರೆ. ದೇವರ ಹೆಸರಲ್ಲಿ ದುಡಿದ ಹಣವನ್ನು ದೇವರಿಗೇ ಸಂದಾಯ ಮಾಡುವ ಈ ವೃದ್ದೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಕಲರಿ ಪಯಟ್ಟು: ಯುದ್ಧ ಕಲೆಯಲ್ಲಿ ಸಾಹಸಗಾಥೆ ಬರೆದ ಮೀನಾಕ್ಷಿ ಅಮ್ಮ..!