ಉಡುಪಿ: ಗೇರು ಬೀಜ ಫ್ಯಾಕ್ಟರಿಯ ಬೀಗ ಮುರಿದು ಸಂಗ್ರಹಿಸಿಟ್ಟ ಗೋಡಂಬಿಯನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕು ಇಂದಿರಾ ನಗರ ನಿವಾಸಿ ಸೈಯದ್ ಮೊಹಮ್ಮದ್ ಬಶೀರ್ ಮತ್ತು ಬಂಟ್ವಾಳ ಮಿತ್ತೂರು ನಿವಾಸಿ ಉಮ್ಮರ್ ಫಾರೂಕ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 26 ರಂದು ಬ್ರಹ್ಮಾವರ ಹೊಸೂರು ಕೆಳಕರ್ಜೆಯಲ್ಲಿರುವ ವಿನಾಯಕ ಕ್ಯಾಶ್ಯೂಸ್ ಗೇರು ಬೀಜದ ಕಾರ್ಖಾನೆಯಲ್ಲಿ ಕಳ್ಳತನ ಯತ್ನ ನಡೆಸಿದ್ದರು. ಚೇರ್ಕಾಡಿ ಗ್ರಾಮದ ಮುಂಡ್ಕಿನ್ ಜೆಡ್ಡು ಎಂಬಲ್ಲಿನ ವಿಜಯದುರ್ಗಾ ಗೇರು ಬೀಜ ಕಾರ್ಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ 1,40,000 ರೂ. ಮೌಲ್ಯದ ಗೇರುಬೀಜ ಕಳ್ಳತನ ಮಾಡಿದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಎರಡು ಪ್ರಕರಣವನ್ನು ಬೇಧಿಸಲು ಹಾಗೂ ಹೆಬ್ರಿ ಪೊಲೀಸ್ ಠಾಣೆ ಮತ್ತು ಅಜೆಕಾರು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಇದೇ ಮಾದರಿಯ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿತ್ತು.
ಸದ್ಯ ಈ ವಿಶೇಷ ತಂಡವೇ ಇವರಿಬ್ಬರನ್ನು ಬಂಧಿಸಿದೆ. ಈ ಆರೋಪಿಗಳ ವಿರುದ್ಧ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ಮತ್ತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಇದೇ ಮಾದರಿಯ ಪ್ರಕರಣಗಳು ದಾಖಲಾಗಿರುತ್ತದೆ. ಬಂಧಿತ ಆರೋಪಿತರಿಂದ ಒಟ್ಟು ಸುಮಾರು ಐದು ಲಕ್ಷದ ಐವತ್ತೆರಡು ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.