ಉಡುಪಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಶಂಕಿತ ಕೊರೊನಾ ಪ್ರಕರಣ ಪತ್ತೆಯಾಗಿದೆ. ಕೊರೊನಾ ಶಂಕಿತ ರೋಗಿ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನಗಳ ಅಂತರದಲ್ಲಿ ಇದು 4ನೇ ಪ್ರಕರಣವಾಗಿದೆ.
ಶಿರ್ವ ಮೂಲದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿವೆ. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಮೂವರ ಪೈಕಿ ಇಬ್ಬರ ವರದಿ ಶಿವಮೊಗ್ಗದ ಪ್ರಯೋಗಾಲಯದಿಂದ ಬಂದಿದ್ದು, ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಇಲ್ಲ ಎನ್ನುವುದು ದೃಢಪಟ್ಟಿದೆ. ಇನ್ನೋರ್ವ ವಿದ್ಯಾರ್ಥಿಯ ವರದಿ ನಾಳೆ ಬರುವ ಸಾಧ್ಯತೆ ಇದೆ.
ಸಾಗರ ಮೂಲದ ಮಹಿಳೆವೋರ್ವಳ ಸ್ಯಾಂಪಲ್ ಅನ್ನು ವೈದ್ಯರು ಮತ್ತೆ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಮೆಕ್ಕಾ ಯಾತ್ರೆ ಮುಗಿಸಿ ಬಂದಿದ್ದ ಸಾಗರ ಮೂಲದ ಮಹಿಳೆಯಲ್ಲಿ ಈ ಹಿಂದೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು. ವರದಿಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಮತ್ತೊಮ್ಮೆ ಲ್ಯಾಬ್ಗೆ ಕಳುಹಿಸಲಾಗಿದೆ.