ಕುಂದಾಪುರ (ಉಡುಪಿ): ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಕನ್ನಡಿಗ ದಂಪತಿಯೇ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಸತ್ಕಾರದ ನೇತೃತ್ವ ವಹಿಸಿದ್ದರು ಎಂಬುದು ವಿಶೇಷ. ಹೌದು, ಅಮೆರಿಕಾದಲ್ಲಿ ಪ್ರಧಾನಿ ಮೋದಿ ಅವರಿಗೆ ಉಡುಪಿ ಜಿಲ್ಲೆಯ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿ ಆನಂದ ಪೂಜಾರಿ ಹಾಗೂ ಅವರ ಪತ್ನಿ ಸುಮಿತಾ ವಿಶೇಷ ಆತಿಥ್ಯ ನೀಡಿದ್ದಾರೆ.
ಇದೇ ಮೊದಲಲ್ಲ:
ಮೋದಿ ಅವರಿಗೆ ಈ ದಂಪತಿ ಆತಿಥ್ಯ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮೋದಿ ಅವರು ಎರಡು ಸಲ ಅಮೆರಿಕಾಗೆ ಹೋಗಿದ್ದಾಗಲೂ ಈ ದಂಪತಿ ಆತಿಥ್ಯ ನೀಡಿದ್ದರು. ಆದ್ರೆ ಇತ್ತೀಚೆಗೆ ಮೂರನೇ ಬಾರಿಗೆ ದೇಶದ ಪ್ರಧಾನಿಗೆ ಆತಿಥ್ಯ ನೀಡುವ ಅಪರೂಪದ ಅವಕಾಶ ಆನಂದ ಪೂಜಾರಿಯವರಿಗೆ ಒದಗಿ ಬಂದಿದೆ.
ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ಯುಎಸ್ನ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ ಮೂರು ದಶಕಗಳಿಂದ ನೆಲೆಸಿದ್ದಾರೆ. ಅಲ್ಲಿ ಅವರು ಭವ್ಯ ವುಡ್ ಲ್ಯಾಂಡ್ಸ್ ಹೊಟೇಲ್ ನಡೆಸುತ್ತಿದ್ದಾರೆ. ಮೊನ್ನೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವನ್ನು ಈ ದಂಪತಿ ಪಡೆದಿದ್ದಾರೆ.
ಪ್ರಧಾನಿ ಮೋದಿಯವರು ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಊಟಕ್ಕೆ ಆದ್ಯತೆ ನೀಡಿದ್ದರು. ದಕ್ಷಿಣ ಭಾರತೀಯ ಖಾದ್ಯಗಳಿಗೆ ಪ್ರಧಾನಿ ಮಾರುಹೋಗಿದ್ದರು ಎನ್ನುತ್ತಾರೆ ಆನಂದ ಪೂಜಾರಿ. ಮೂಲತಃ ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರರಾದ ಆನಂದ ಪೂಜಾರಿ, ಅಮೆರಿಕದಲ್ಲಿ ನೆಲೆಸಿದ್ದರೂ ಊರಿಗೆ ಆಗಾಗ ಬರುತ್ತಿರುತ್ತಾರೆ.