ಮಣಿಪಾಲ(ಉಡುಪಿ): ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ವೈದ್ಯರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮೃತ ವೈದ್ಯರನ್ನು ಸ್ಥಳೀಯ ಮಣಿಪಾಲ ಆಸ್ಪತ್ರೆಯ ಡಾ. ಸೂರ್ಯನಾರಾಯಣ ಎಂದು ಗುರುತಿಸಲಾಗಿದೆ. ಮೂಲತಃ ಅವರು ಬೆಂಗಳೂರಿನವರಾಗಿದ್ದಾರೆ. ಜೊತೆಗಿದ್ದ ಅವರ ಗೆಳೆಯರಾದ ಕೇರಳದ ಸಂಗೀತ್ ಮತ್ತು ಉತ್ತರ ಪ್ರದೇಶದ ದಿವಿತ್ ಸಿಂಗ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ಮೂವರು ಗೆಳೆಯರು ಊಟ ಮುಗಿಸಿ ತಮ್ಮ ಫ್ಲ್ಯಾಟ್ಗೆ ವಾಪಸ್ ಆಗುತ್ತಿದ್ದ ವೇಳೆ ಹೋಟೆಲ್ ಹಾಟ್ ಅಂಡ್ ಸ್ಪೈಸಿ ಎದುರುಗಡೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ತಲೆಗೆ ತೀವ್ರ ಗಾಯಗಳಾಗಿ ಸೂರ್ಯನಾರಾಯಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: ನಾಗ್ಪುರದಿಂದ ಪುಣೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಒಂದು ಡಿವೈಡರ್ಗೆ ಡಿಕ್ಕಿ ಹೊಡೆದು, ರಸ್ತೆ ಉರುಳಿ ಬಿದ್ದಿದ್ದು, ನಂತರ ಡೀಸೆಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡು, ಬಸ್ ನಲ್ಲಿದ್ದ 33 ಜನರ ಪೈಕಿ 25 ಜನರು ಸಜೀವ ದಹನವಾಗಿರುವ ಘಟನೆ ಸಿಂಧಖೇಡ್ ಪ್ರದೇಶದಲ್ಲಿ ನಡೆದಿದೆ.
ಬಸ್ನಲ್ಲಿದ್ದ ಪ್ರಯಾಣಿಕರು ನಿದ್ದೆಗೆ ಜಾರಿದ್ದರಿಂದ ಹೆಚ್ಚಿನ ಪ್ರಾಣಹಾನಿ ಸಂಭವಿಸಿದೆ. ಬಸ್ನಲ್ಲಿ ಇಬ್ಬರು ಚಾಲಕರಿದ್ದು, ಒಬ್ಬರ ಚಾಲಕ ಸಾವನ್ನಪ್ಪಿದರೆ, ಮತ್ತೊಬ್ಬ ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇಬ್ಬರು ಚಾಲಕರಲ್ಲಿ ಒಬ್ಬ ಚಾಲಕ ಬಸ್ ಅನ್ನು ಕಾರಂಜಿ ವರೆಗೆ ಚಲಾಯಿಸಿಕೊಂಡು ಬಂದಿದ್ದು, ಅಲ್ಲಿಂದ ನಂತರ ಇನ್ನೊಬ್ಬ ಚಾಲಕ ಚಾಲಕ ಸೀಟ್ನಲ್ಲಿ ಕುಳಿತಿದ್ದರು. ಬಸ್ ನಲ್ಲಿದ್ದ ಎಂಟು ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಮಕ್ಕಳೂ ಸೇರಿದ್ದಾರೆ.
ಆಟೋ- ಲಾರಿ ಡಿಕ್ಕಿ, ಒಂಬತ್ತು ಜನ ಸಾವು: ಎರಡು ಆಟೋಗಳು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ, ಘಟನೆಯಲ್ಲಿ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪ ಶುಕ್ರವಾರ ನಡೆದಿತ್ತು. ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದರು.
ಒಂದೇ ಕುಟುಂಬದ ಹತ್ತು ಮಂದಿ ತುಂಗಭದ್ರಾ ಡ್ಯಾಂ ನೋಡಲು ಹೋಗುತ್ತಿದ್ದು, ಹೊಸಪೇಟೆ ತಾಲೂಕಿ ವಡ್ಡರಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ, ಲಾರಿ ಹಾಗೂ ಎರಡು ಆಟೋಗಳ ನಡುವೆ ಅಪಘಾತ ಸಂಭವಿಸಿ, ಆಟೋಗಳು ಕಂದಕಕ್ಕೆ ಬಿದ್ದಿದ್ದವು. ಎರಡು ಆಟೋಗಳಲ್ಲಿ ಸುಮಾರು 20 ಮಂದಿ ಇದ್ದರು. ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಧನವನ್ನು ಸಿಎಂ ಪರಿಹಾರ ನಿಧಿಯಿಂದ ಘೋಷಣೆ ಮಾಡಲಾಗಿತ್ತು.
ಇದನ್ನೂ ಓದಿ: ಮಂಗಳೂರಿನಲ್ಲಿ ಡಿವೈಡರ್ಗೆ ಸ್ಕೂಟರ್ ಡಿಕ್ಕಿ.. ಅಪ್ರಾಪ್ತರಿಬ್ಬರ ದಾರುಣ ಸಾವು