ಉಡುಪಿ: ಈಗ ತಾನೇ ದ್ವಿತೀಯ ಪಿಯುಸಿ ಮುಗಿಸಿರುವ 18 ರ ಪೋರನೊಬ್ಬ, ಇಪ್ಪತ್ತಕ್ಕೂ ಅಧಿಕ ಡ್ರೋನ್ಗಳನ್ನು ತಯಾರಿಸಿದ್ದಾನೆ. ಉಡುಪಿಯ ಮೂಡುಬೆಳ್ಳೆ ಎಂಬ ಪುಟ್ಟ ಗ್ರಾಮದಲ್ಲಿ ಗ್ಲೇನ್ ರೆಬೆಲ್ಲೊ ಎಂಬ ಯುವಕ, ಡ್ರೋನ್ ತಯಾರಿಸಿದ್ದು, ಮಾರುಕಟ್ಟೆಯಲ್ಲಿ ಸಿಗುವ ಕಚ್ಚಾವಸ್ತುಗಳನ್ನು ತಂದು ಅವುಗಳನ್ನು ಬೇಡಿಕೆಗೆ ಅನುಗುಣವಾಗಿ ಅಸೆಂಬಲ್ ಮಾಡಿಕೊಡುವ ಕೆಲಸ ಮಾಡುತ್ತಾನೆ.
ಈ ಹುಡುಗ ನಿರ್ಮಿಸಿದ ಡ್ರೋನ್ಗಳಿಗೆ ಉಡುಪಿ, ಮಂಗಳೂರು ಸೇರಿದಂತೆ ಮುಂಬೈನಿಂದ ಕೂಡ ಬೇಡಿಕೆಗಳು ಬಂದಿದ್ದು, ಮಾರುಕಟ್ಟೆಯಲ್ಲಿ ಒಂದರಿಂದ ಎರಡು ಲಕ್ಷ ಬೆಲೆ ಬಾಳುವ ಡ್ರೋನ್ಗಳ ಬದಲಿಗೆ, ಗ್ಲೇನ್ 30 ರಿಂದ 40 ಸಾವಿರದಲ್ಲಿ ಅತ್ಯುತ್ತಮ ಸಾಮರ್ಥ್ಯದ ಡ್ರೋನ್ಗಳನ್ನು ತಯಾರಿಸುತ್ತಾನೆ.
ಬಾಲಿವುಡ್ ಚಿತ್ರಗಳ ಚೇಸಿಂಗ್ ದೃಶ್ಯಗಳಿಗೆ ಈತ ತಯಾರಿಸಿದ ಡ್ರೋನ್ಗಳು ಬಳಕೆಯಾಗಿವೆ. ಈತನ ಡ್ರೋನ್ ಆಪರೇಟಿಂಗ್ ಸ್ಕಿಲ್ ಗಮನಿಸಿ ಭಾರತೀಯ ಸೇನೆಯ ಅಧಿಕಾರಿಗಳು, ಮುಂಬೈನಲ್ಲಿ ನಡೆಸಿದ ಸೈಲ್ ಇಂಡಿಯಾ 2019 ಕಾರ್ಯಕ್ರಮದ ಡ್ರೋನ್ ಚಿತ್ರೀಕರಣಕ್ಕೆ ಕರೆಸಿಕೊಂಡಿದ್ದರು. ಈ ಕಾರ್ಯಕ್ರಮದ ಚಿತ್ರೀಕರಣವನ್ನು ಗಮನಿಸಿ ಹಲವಾರು ಪ್ರೊಫೆಷನಲ್ ಆಪರೇಟರ್ಸ್ ದಂಗುಬಡಿದು ಹೋಗಿದ್ದಾರೆ.
ಗ್ಲೇನ್ ರೆಬೆಲ್ಲೊ ಈಗಾಗಲೇ ಹತ್ತು ಕಿಲೋ ಭಾರ ಎತ್ತುವ ಡ್ರೋನ್ ಅಸೆಂಬಲ್ ಮಾಡಿದ್ದು, ಯಾವುದೇ ಕೆಟ್ಟು ಹೋದ ಡ್ರೋನ್ಗಳನ್ನು ಸರಿಪಡಿಸುವ ಚಾಕಚಕ್ಯತೆ ಹೊಂದಿದ್ದಾನೆ. ಹಿಂದೆ ಮಂಗಳೂರು-ಉಡುಪಿ ಭಾಗದ ಡ್ರೋನ್ ಆಪರೇಟರ್ಸ್ ದೂರದ ಮುಂಬೈಗೆ ತಮ್ಮ ಡ್ರೋನ್ಗಳನ್ನು ಸರ್ವಿಸ್ ಮಾಡಲು ಕಳುಹಿಸುತ್ತಿದ್ದರು. ಈಗ ಮೂಡುಬೆಳ್ಳೆ ಎಂಬ ಗ್ರಾಮಕ್ಕೆ ಗ್ಲೇನ್ ರೆಬೆಲ್ಲೋನನ್ನ ಹುಡುಕಿಕೊಂಡು ಬರುತ್ತಿದ್ದಾರೆ.
ಡ್ರೋನ್ ತಯಾರಿಕೆಯಿಂದ ಬಂದ ದುಡ್ಡಿನಿಂದ ತನ್ನ ಶಿಕ್ಷಣದ ಖರ್ಚು ವೆಚ್ಚವನ್ನು ಭರಿಸಿರುವ ಗ್ಲೇನ್, ಮುಂದೆ ಇಂಜಿನಿಯರಿಂಗ್ ಮುಗಿಸಿ ವೈಮಾನಿಕ ರಂಗದಲ್ಲಿ ಬದುಕು ಕಟ್ಟಿಕೊಳ್ಳುವ ಆಸೆ ಹೊಂದಿದ್ದಾನೆ. ಹತ್ತನೇ ತರಗತಿಯಲ್ಲಿ ಇರುವಾಗಲೇ ಯೂಟ್ಯೂಬ್ ನೋಡಿ ಯಶಸ್ವಿಯಾಗಿ ಡ್ರೋನ್ ತಯಾರಿಸಿ ಹಾರಾಟ ಮಾಡಿದ್ದ ಗ್ಲೇನ್, ಈವರೆಗೆ ಸುದ್ದಿಯಾಗದೆ ಎಲೆಮರೆಯಲ್ಲಿ ಉಳಿದಿದ್ದಾನೆ.