ಉಡುಪಿ: ಎಂಬಿಎ ಪದವಿ ಪಡೆದ ಆಕೆಗೆ ಮುಂಬೈನಲ್ಲಿ ಕೈತುಂಬಾ ಸಂಬಳ ಬರುವ ಉದ್ಯೋಗ ಇತ್ತು. ಆದ್ರೆ ತನ್ನೂರಿನ "ಉಡುಪಿ ಸೀರೆ"ಯನ್ನು ಉಳಿಸಿ ಬೆಳಸಬೇಕು ಅಂತ ಪಣತೊಟ್ಟಿರುವ ಯುವತಿ, ಮಗ್ಗದ ಸೀರೆಗೆ ಮಾಡರ್ನ್ ವಿನ್ಯಾಸ ರೂಪಿಸಿ, ಆನ್ಲೈನ್ನಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಇಷ್ಟೇ ಅಲ್ಲ, ತನ್ನೂರಿನ ನೇಕಾರರನ್ನು ಸೇರಿಸಿ ಪಾರಂಪರಿಕ ಉಡುಪಿ ಸೀರೆಗೆ ಮಾಡರ್ನ್ ಟಚ್ ನೀಡುತ್ತಿದ್ದಾರೆ.
ಬಣ್ಣ ಬಣ್ಣದ ಮಗ್ಗದ ಸೀರೆಗಳು, ಸೀರೆಗಳನ್ನು ಒಂದೊಂದಾಗಿ ಜೋಡಿಸುತ್ತಿರುವ ಯುವತಿ. ವಿವಿಧ ಬಣ್ಣದ ಸೀರೆಗಳನ್ನು ಜೋಡಿಸಿಡುವುದು ಮಾತ್ರವಲ್ಲ, ಮಗ್ಗದ ಉಡುಪಿ ಸೀರೆಗಳನ್ನು ನೇಯ್ದು ವಿನ್ಯಾಸ ರೂಪಿಸುವುದರಲ್ಲೂ ಈಕೆ ಪರಿಣಿತೆ. ಅಂದಹಾಗೆ ಈಕೆಯ ಹೆಸರು ಮಹಾಲಸ ಕಿಣಿ. ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ ಈಕೆ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮುಗಿಸಿ ಮುಂಬೈನಲ್ಲಿ ಉತ್ತಮ ಸಂಬಳ ಬರುವ ಉದ್ಯೋಗದಲ್ಲಿದ್ರು. ಆದ್ರೆ ಉಡುಪಿ ಸೀರೆಯನ್ನು ಪ್ರಸಿದ್ಧಿಗೊಳಿಸಬೇಕು ಅಂತ ಪಣತೊಟ್ಟು ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ತವರಿಗೆ ಹಿಂದಿರುಗಿದ್ದಾರೆ.
ಊರಿನಲ್ಲೇ ಕೈಮಗ್ಗದ ಉಡುಪಿ ಸೀರೆಯ ವಿನ್ಯಾಸ ರೂಪಿಸಿ, ನೇಯಿಗೆ ಕಲಿತು ಆಕರ್ಷವಾದ ಸೀರೆಗಳನ್ನು ತಯಾರಿಸುತ್ತಿದ್ದಾರೆ. ಮಾಡರ್ನ್ ಲೈಫ್ ಸ್ಟೈಲ್ ನ ಯುವತಿಯರನ್ನು ಉಡುಪಿ ಸೀರೆಗಳತ್ತ ಆಕರ್ಷಿಸುವ ನಿಟ್ಟಿನಲ್ಲಿ ಆಧುನಿಕವಾಗಿ ಹೊಸ ಹೊಸ ವಿನ್ಯಾಸಗಳನ್ನು ರೂಪಿಸುತ್ತಿದ್ದಾರೆ. ಅದನ್ನು ಉಡುಪಿ ಪ್ರಾಥಮಿಕ ನೇಕಾರರ ಸಂಘ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘ, ಕಿನ್ನಿಗೋಳಿ ನೇಕಾರರ ಸಂಘದವರಿಗೆ ನೀಡಿ, ಆಧುನಿಕ ಸ್ಪರ್ಶ ಇರುವ ಉಡುಪಿ ಸೀರೆ ತಯಾರಿಸುತ್ತಿದ್ದಾರೆ. ನಂತರ ಈ ಸೀರೆಗಳನ್ನು ಆನ್ಲೈನ್ನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೊಸ ವಿನ್ಯಾಸದಿಂದ ಸೀಮಿತ ಮಾರುಕಟ್ಟೆ ಇರುವ ಉಡುಪಿ ಸೀರೆಗೆ ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಮಹಾಲಸ ಕಿಣಿ.
ಉಡುಪಿ ಸೀರೆ ಕಡು ಬೇಸಗೆಗೆ ಹೇಳಿ ಮಾಡಿಸಿದ ಬ್ರ್ಯಾಂಡ್, ಆದ್ರೆ ಇದನ್ನು ನೇಯುವ ನೇಕಾರರ ಕಷ್ಟವನ್ನು ಮಾತ್ರ ಯಾರೂ ಕೇಳೋರಿಲ್ಲ. ಯಕ್ಷಗಾನ ಹೇಗೆ ಕರಾವಳಿಯ ಲಾಂಛನವೋ ಹಾಗೆಯೇ ಒಂದು ಕಾಲದಲ್ಲಿ ಉಡುಪಿ ಸೀರೆಯನ್ನೂ ಕರಾವಳಿಯ ಸಿಂಬಲ್ ಅಂತ ಪರಿಗಣಿಸಲಾಗಿತ್ತು. ಯಕ್ಷಗಾನದಲ್ಲಿ ಬಳಸುವ ಕಲರ್ಫುಲ್ ಬಟ್ಟೆಗಳು ಕರಾವಳಿಯ ಕೈಮಗ್ಗದ ಜಾಣ್ಮೆಗೆ ಸಾಕ್ಷಿ. ಶಿವರಾಮ ಕಾರಂತರಂತಹ ಹಿರಿಯ ಚೇತನಗಳು ಈ ಮಾದರಿ ಬಟ್ಟೆಯನ್ನು ಯಕ್ಷಗಾನದ ಮೂಲಕ ವಿದೇಶದಲ್ಲೂ ಜನಪ್ರಿಯಗೊಳಿಸಿದ್ದರು. ಆದರೆ ಈಗೀಗ ಸೀರೆ ಧರಿಸುವವರೇ ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಮಹಾಲಸ ಕಿಣಿಯವರು ಹೊಸ ಹೊಸ ವಿನ್ಯಾಸ ರೂಪಿಸಿ ಮಾಡರ್ನ್ ಶೈಲಿಯಲ್ಲಿ ತಯಾರು ಮಾಡುವ ಕಾರಣ ಈಗಿನ ಯುವತಿಯರಿಗೂ ಇಷ್ಟವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಪಾರಂಪರಿಕ ನೇಕಾರರಿಗೂ ನೆರವಾಗಿದೆ ಅಂತಾರೆ ನೇಕಾರ ಭಾಸ್ಕರ್ ಶೆಟ್ಟಿಗಾರ್.
ಒಟ್ಟಾರೆಯಾಗಿ ಸಿಟಿ ಲೈಫ್ಸ್ಟೈಲ್ಗೆ ಮಾರುಹೋಗಿ ನಗರಗಳತ್ತ ಮುಖ ಮಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ತನ್ನೂರಿನ ಉಡುಪಿ ಸೀರೆಯನ್ನು ಆನ್ಲೈನ್ ವ್ಯವಹಾರ ಮಾಡುವುದರ ಜೊತೆಗೆ ನೇಕಾರ ವರ್ಗಕ್ಕೂ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆಯೇ ಸರಿ.