ಉಡುಪಿ: ನಿನ್ನೆ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟ ಕಾರ್ಕಳದ ಮಾಜಿ ಶಾಸಕ ಗೋಪಾಲ್ ಭಂಡಾರಿಯವರಿಗೆ ಪಕ್ಷದ ಕಾರ್ಯಕರ್ತರು, ಬಂಧುಗಳು ಅಂತಿಮ ನಮನ ಸಲ್ಲಿಸಿದ್ರು.
ಕಾರ್ಕಳದ ಕಿಸಾನ್ ಸಭಾದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇವತ್ತು ಬೆಳಗ್ಗೆಯೇ ವಿವಿಧ ಪಕ್ಷಗಳ ಮುಖಂಡರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮೃತ ಗೋಪಾಲ್ ಭಂಡಾರಿ ಕರಾವಳಿಯ ಅಜಾತಶತ್ರು ನಾಯಕರಾಗಿದ್ದು ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ಹೀಗಾಗಿ ಬೆಳಗ್ಗಿನಿಂದಲೇ ಕಾರ್ಕಳದಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಆಗಮಿಸಿ ಅಗಲಿದ ನಾಯಕನಿಗೆ ವಿದಾಯ ಹೇಳಿದರು.
ಬಳಿಕ ಹುಟ್ಟೂರು ಹೆಬ್ರಿಯಲ್ಲೂ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ಗೋಪಾಲ್ ಭಂಡಾರಿ ನಿನ್ನೆ ರಾತ್ರಿ ಬಸ್ ಪ್ರಯಾಣದ ವೇಳೆ ಮಾರ್ಗ ಮಧ್ಯದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದರು. ಬೆಂಗಳೂರಿನಿಂದ ವಾಪಾಸಾಗುವಾಗ ಅವರು ಚಿರನಿದ್ರೆಗೆ ಜಾರಿದ್ದರು. ಮಂಗಳೂರು ಬಸ್ ನಿಲ್ದಾಣಕ್ಕೆ ಬಂದಾಗಲಷ್ಟೇ ನಿಧನರಾದ ಬಗ್ಗೆ ತಿಳಿದು ಬಂದಿತ್ತು.
ಹುಟ್ಟೂರು ಹೆಬ್ರಿಯಲ್ಲಿ ಇವತ್ತು ಅಂತ್ಯಸಂಸ್ಕಾರ ನಡೆಯಲಿದೆ. ಎರಡು ಅವಧಿಗೆ ಕಾರ್ಕಳದ ಶಾಸಕರಾಗಿದ್ದ ಭಂಡಾರಿಯವರು ಜನಸೇವೆ ಮತ್ತು ನಿಸ್ವಾರ್ಥ ಸೇವೆಗಳಿಂದ ಕರಾವಳಿಯ ಜನರ ಪ್ರೀತಿಗೆ ಭಾಜನರಾಗಿದ್ದರು. ಉಡುಪಿ ಜಿಲ್ಲೆ ಹೆಬ್ರಿಯಲ್ಲಿರುವ ಗೋಪಾಲ ಭಂಡಾರಿ ಅವರ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆದವು. ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ, ಸಚಿವೆ ಜಯಮಾಲಾ, ಶಾಸಕ ಸುನೀಲ್ ಕುಮಾರ್ ಉಪಸ್ಥಿತಿಯೊಂದಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.