ಕೃಷ್ಣ, ಬಲರಾಮ, ಸುಭದ್ರೆಗೆ ಜನ್ಮ ನೀಡಿದ ಹಸು; ಕೃಷ್ಣಾಷ್ಟಮಿಗೆ ಸಾಕ್ಷಿಯಾದ ಅಪರೂಪದ ಘಟನೆ - ಕೃಷ್ಣಾಷ್ಟಮಿಗೆ ಸಾಕ್ಷಿ
ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದೆ. ಕೃಷ್ಣ ಜನ್ಮಾಷ್ಟಮಿ ದಿನವೇ ಹಸು ಬಲು ಅಪರೂಪವೆಂಬಂತೆ ಎರಡು ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದ್ದರಿಂದ ಕರುಗಳನ್ನು ಮತ್ತು ಹಸು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.
ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮಜೂರು ಎಂಬಲ್ಲಿ ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡುವ ಮೂಲಕ ಅಪರೂಪದ ಘಟನೆಗೆ ಸಾಕ್ಷಿಯಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂದರೆ ರೋಹಿಣಿ ನಕ್ಷತ್ರ, ವೃಷಭ ರಾಶಿಯ ಪವಿತ್ರವಾದ ಅಷ್ಟಮಿಯ ದಿನವಾದ ಇಂದು ಶ್ರೀ ಕೃಷ್ಣನ ಜನನವಾಗಿತ್ತು. ಕೃಷ್ಣನಿಗೆ ಗೋವುಗಳೆಂದರೆ ಅಚ್ಚು ಮೆಚ್ಚು. ಮಜೂರಿನ ಜಾರಂದಾಯ ಸಾನದ ಮನೆಯಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ್ದರಿಂದ ಮಜೂರು ಪರಿಸರದ ಗ್ರಾಮಸ್ಥರು ಕರುಗಳನ್ನು ಮತ್ತು ಹಸು ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಅಷ್ಟಮಿ ದಿನವಾದ ಇಂದು ಬೆಳಿಗ್ಗೆ ಮನೆಯ ಹಸು ಬಲು ಅಪರೂಪವೆಂಬಂತೆ ಎರಡು ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಅವುಗಳಿಗೆ ಕೃಷ್ಣ, ಬಲರಾಮ, ಸುಭದ್ರ ಎಂದು ಇದೇ ವೇಳೆ ಹೆಸರಿಡಲಾಯಿತು ಎಂದು ಹಸು ಮಾಲೀಕರು ಹರ್ಷ ವ್ಯಕ್ತಪಡಿಸಿದ್ದಾರೆ.