ತುಮಕೂರು: ರಾಜ್ಯದ ಎಲ್ಲಾ ಪಶುವೈದ್ಯ ಆಸ್ಪತ್ರೆಗಳಿಗೆ ಅಗತ್ಯವಿರುವ ಕಂಪ್ಯೂಟರ್ ಹಾಗೂ ಇಂಟರ್ನೆಟ್ ವ್ಯವಸ್ಥೆಯನ್ನು ಮುಂದಿನ ವರ್ಷದಿಂದ ಕಲ್ಪಿಸಲಾಗುವುದು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ಭರವಸೆ ನೀಡಿದರು.
ವಿಶ್ವ ಪಶು ವೈದ್ಯಕೀಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಪಶುವೈದ್ಯ ಆಸ್ಪತ್ರೆಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, 2,800 ಕಂಪ್ಯೂಟರ್ಗಳನ್ನು ನೀಡಲು ಇಗಾಗಲೇ ಪ್ರಸ್ತಾಪಿಸಲಾಗಿದೆ. ಸರ್ಕಾರದಿಂದ ಮಂಜೂರಾದ ತಕ್ಷಣವೇ ಎಲ್ಲಾ ಆಸ್ಪತ್ರೆಗಳಿಗೂ ಸರಬರಾಜು ಮಾಡಲಾಗುವುದು. ಇಲಾಖೆಯ ಐದು ವಿವಿಧ ಕಾರ್ಯಕ್ರಮಗಳನ್ನು ಸಕಾಲಕ್ಕೆ ಜಾರಿಗೆ ತರುತ್ತಿದ್ದು, ಕೆಲಸ ಮಾಡಲು ಕಂಪ್ಯೂಟರ್ಗಳು ಅತ್ಯವಶ್ಯಕ ಎಂದರು.
ಮೇವು ಬ್ಯಾಂಕ್ ಮತ್ತು ಗೋಶಾಲೆ ನಿರ್ವಹಣೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ 31 ಜನರ ಪಶು ವೈದ್ಯರ ಮೇಲೆ ಲೋಕಾಯುಕ್ತದಲ್ಲಿರುವ ದೂರಿನ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ, ತಪ್ಪು ಮಾಡದೇ ಇರುವ ವೈದ್ಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಉಪೇಂದ್ರ ಪ್ರತಾಪ್ ಸಿಂಗ್ ವೈದ್ಯಾಧಿಕಾರಿಗಳಿಗೆ ಭರವಸೆ ಕೊಟ್ಟರು.
ಪಶುವೈದ್ಯಕೀಯ ಇಲಾಖೆಯ ನಿರ್ದೇಶಕ ಎಂ.ಟಿ ಮಂಜುನಾಥ್ ಮಾತನಾಡಿ, ವೈದ್ಯಕೀಯ ಸಿಬ್ಬಂದಿ ಶಿಕ್ಷಣ ಮುಗಿಸಿ ಇಲಾಖೆಗೆ ಸೇರಿದ ನಂತರವೇ ನಿಜವಾದ ಕಲಿಕೆ ಆರಂಭವಾಗುತ್ತದೆ. ಸರ್ಕಾರ ಮತ್ತು ರೈತರು, ಸಾರ್ವಜನಿಕರೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದರ ಮೇಲೆ ನಿಮ್ಮ ವೃತ್ತಿ ಜೀವನದ ಏಳು-ಬೀಳುಗಳು ಇರುತ್ತವೆ. ರೈತರಿಗೆ, ಜಾನುವಾರುಗಳ ಮಾಲೀಕರಿಗೆ ನಿಮ್ಮ ಸೇವೆ ತೃಪ್ತಿಯಾಗುವಂತೆ ಇರಬೇಕು ಎಂದು ಸಿಬ್ಬಂದಿ, ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.