ತುಮಕೂರು: ಪ್ರತಿಯೊಂದು ಜೀವಕ್ಕೂ ಬೆಲೆ ಇದೆ ನಮ್ಮ ನಿರ್ಲಕ್ಷದಿಂದ ಅಪಾಯವಾದರೆ ಆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಹೀಗಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ 48ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡಿದರು. ಕಾರ್ಮಿಕರ ರಕ್ಷಣೆ ನಮ್ಮೆಲ್ಲರ ಹೊಣೆ, ಅವರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಅವರ ಆರೋಗ್ಯ ಕಾಪಾಡುವುದು, ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು, ಅವರ ಬದುಕಿಗೆ ನೆರವಾಗುವುದು ನಮ್ಮ ಆಡಳಿತ ಹಾಗೂ ಅಧಿಕಾರಿಗಳ ಜವಾಬ್ದಾರಿ ಎಂದರು.
ಕಾರ್ಮಿಕರ ಸುರಕ್ಷತೆ ಆರೋಗ್ಯ ಮತ್ತು ಪರಿಸರ ರಕ್ಷಣೆ ಮತ್ತು ಜಾಗೃತಿ ಮೂಡಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಕಾರ್ಮಿಕರ ಹಿತಾಸಕ್ತಿ ದೇಶದ ಆರ್ಥಿಕ ಸದೃಢತೆಯ ದೃಷ್ಟಿಯಿಂದ ಅವಶ್ಯಕವಾಗಿದ್ದು, ತುಮಕೂರಿನಲ್ಲಿ 4 ಕೋಟಿ ರೂ ವೆಚ್ಚದ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಈ ಬಗ್ಗೆ ಕಾರ್ಮಿಕ ಸಚಿವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.