ತುಮಕೂರು: ತಾಯಿ ಹಾಗೂ ತನ್ನ ಇಬ್ಬರ ಮಕ್ಕಳು ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿರೋ ಘಟನೆ ತುಮಕೂರು ತಾಲೂಕು ತಿರುಮಲ ಪಾಳ್ಯದಲ್ಲಿ ನಡೆದಿದೆ. ಮೃತರನ್ನ ಹೇಮಲತಾ (34), ಮಾನಸ(6), ಪೂರ್ವಿಕ(3) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ 7.30ರಲ್ಲಿ ಹೇಮಲತಾ ತನ್ನ ಇಬ್ಬರು ಮಕ್ಕಳೊಂದಿಗೆ ಹುಣ್ಣಿಮೆ ಪ್ರಯುಕ್ತ ತುಳಸಿಪುರ ಗ್ರಾಮ ವ್ಯಾಪ್ತಿಯಲ್ಲಿ ತಮ್ಮ ಅಡಿಕೆ ಮತ್ತು ತೋಟಕ್ಕೆ ಪೂಜೆಗೆ ತೆರಳಿದ್ದರು. ಬೆಳಗ್ಗೆ 9 ಗಂಟೆ ಆದರೂ ಮನೆಗೆ ವಾಪಸ್ ಬಾರದ ಕಾರಣ ಪತಿ ಕುಮಾರ್ ತೋಟಕ್ಕೆ ಹೋಗಿ ನೋಡಿದಾಗ, ಅವರ ಜಮೀನಿನಲ್ಲಿರುವ ಬಾವಿಯಲ್ಲಿ ಮಗುವಿನ ಶವ ತೇಲುತ್ತಿತ್ತು. ಭಯ ಭೀತಿಯಿಂದ ಕೂಗಾಡುತ್ತಿದ್ದರು, ಇದನ್ನು ಗಮನಿಸಿದ ಅಕ್ಕ ಪಕ್ಕದ ಜಮೀನು ಮಾಲೀಕರು ಬಂದು ನೋಡಿದಾಗ ಮಗುವಿನ ಶವ ಮಾತ್ರ ಬಾವಿಯಲ್ಲಿ ತೇಲುತ್ತಿತ್ತು. ನಂತರ ಕೋರಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಅಗ್ನಿಶಾಮಕ ದಳ ದೊಂದಿಗೆ ಸ್ಥಳಕ್ಕೆ ಬಂದು ಬಾವಿಯಲ್ಲಿ ಪರಿಶೀಲಿಸಿದಾಗ ಹೇಮಲತ ಹಾಗೂ ಮತ್ತೊಂದು ಮಗುವಿನ ಶವ ಪತ್ತೆಯಾಗಿದೆ. 3 ಶವಗಳನ್ನು ಬಾವಿಯಿಂದ ಹೊರ ತೆಗೆದು ಶವಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಉದ್ದೇಶಪೂರ್ವಕವಾಗಿಯೇ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೋಲಿಸ್ ಮೂಲದ ಪ್ರಕಾರ ಮೊದಲನೆ ಮಗಳು ಮಾನಸ ಬಾವಿಯ ದಡದಲ್ಲಿದ್ದ ಸೀಬೆಹಣ್ಣಿನ ಮರದಲ್ಲಿ ಸೀಬೆಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ.
ಆ ಸಂದರ್ಭದಲ್ಲಿ ಜತೆಯಲ್ಲೇ ಇದ್ದ ಮತ್ತೊಂದು ಮಗು ಪೂರ್ವಿಕಾಳು ಅಕ್ಕನಂತೆಯೇ ಬಾವಿಗೆ ಬಿದ್ದಿದ್ದಾಳೆ. ತನ್ನ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಹೇಮಲತಾ ಮಕ್ಕಳನ್ನು ರಕ್ಷಿಸಲೆಂದು ಬಾವಿಗೆ ಹಾರಿದ್ದಾರೆ. ದುರಾದೃಷ್ಟವಶಾತ್ ತಾಯಿ ಮತ್ತು ಇಬ್ಬರು ಮಕ್ಕಳು ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರವಾಡ್, ಡಿವೈಎಸ್ಪಿ ಶ್ರೀನಿವಾಸ್, ಸರ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ, ಕೋರಾ ಪಿಎಸ್ಐ ಹರೀಶ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.