ತುಮಕೂರು: ಮುಂಬರುವ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚಿಗೆ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದರು. ಅವರ ಬೆನ್ನಲ್ಲೇ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ತುಮಕೂರು ಜಿಲ್ಲೆಗೆ ಯಾರೇ ಬಂದರೂ ಬಿಜೆಪಿ ಸರ್ಕಾರದ ಮೇಲೆ ಇರುವ ಸರ್ಕಾರಿ ವಿರೋಧದ ಅಲೆ ಕಡಿಮೆ ಮಾಡಲು ಸಾಧ್ಯವಿಲ್ಲ. ಜೆ ಪಿ ನಡ್ಡಾ, ನರೇಂದ್ರ ಮೋದಿ ಅವರು ಬಂದರು ಕೂಡ ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜನರು ಈಗಾಗಲೇ ಕಾಂಗ್ರೆಸ್ ಪರವಾಗಿ ಮತ ಹಾಕಲು ತೀರ್ಮಾನ ಮಾಡಿ ಆಗಿದೆ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಬದಲಾವಣೆಯ ಗಾಳಿ ಬೀಸ್ತಿದೆ. ಜನರು ಕಾಂಗ್ರೆಸ್ ಸರ್ಕಾರದ 5 ವರ್ಷದ ಆಡಳಿತವನ್ನು ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಸರ್ಕಾರದವರು ಬರೀ ಸುಳ್ಳು ಹೇಳಿಕೊಂಡ ಓಡಾಡುತ್ತಿದ್ದಾರೆ. ಮುಂದೆ ಬರುವ ಚುನಾವಣೆಗೆ ಹಳೆ ಮೈಸೂರು ಪ್ರಾಂತ್ಯವನ್ನು ಟಾರ್ಗೆಟ್ ಮಾಡಿರುವ ಬಿಜೆಪಿಯವರು, ಉತ್ತರ ಕರ್ನಾಟಕದ ಎಲ್ಲ ಕ್ಷೇತ್ರವನ್ನ ಗೆದ್ದಾಯ್ತಾ..? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಬಿಜೆಪಿ ಸುಳ್ಳಿನ ಫ್ಯಾಕ್ಟರಿ: ಹಳೆ ಮೈಸೂರು ಪ್ರಾಂತ್ಯದ ಜನ ಬಿಜೆಪಿ ಮಾತಿಗೆ ಮಣೆ ಹಾಕವುದಿಲ್ಲ, ಬಿಜೆಪಿ ಪಕ್ಷದವರು ಸುಳ್ಳು ಹೇಳುತ್ತಾರೆ ಎಂದು ಜನಕ್ಕೆ ಈಗಾಗಲೇ ಗೊತ್ತಾಗಿದೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಎಂದು ಜನರಿಗೆ ತಿಳಿದಿದೆ. 2018ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು, 600 ಭರವಸೆಗಳನ್ನ ಕೊಟ್ಟಿದ್ದರು. ಅದರಲ್ಲಿ ಶೇ. 10ರಷ್ಟು ಭರವಸೆಗಳನ್ನು ಸಹ ಪೂರ್ಣಗೊಳಿಸಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಂದಿನಿ ಹಾಲನ್ನು ಅಮುಲ್ ಜೊತೆ ವಿಲೀನದ ಪ್ರಸ್ತಾಪ ಮಾಡಿದ ಅಮಿತ್ ಶಾ ಬಗ್ಗೆ ಮಾತನಾಡಿ ''ಪಾಪ ಅಮಿತ್ ಶಾ ಅವರಿಗೂ ಗೊತ್ತಿಲ್ಲ, ನಮ್ಮ ರಾಜ್ಯದಲ್ಲಿ ಸುಮಾರು 15 ಸಾವಿರ ಹಾಲಿನ ಸೊಸೈಟಿಗಳಿವೆ. ಜೊತೆಗೆ 25 ಲಕ್ಷಕ್ಕೂ ಹೆಚ್ಚು ಜನ ರೈತರು ಕೆಎಂಎಫ್ (ಕರ್ನಾಟಕ ಹಾಲು ಒಕ್ಕೂಟ) ಮೇಲೆ ಅವಲಂಬನೆ ಆಗಿದ್ದಾರೆ, ಸುಮಾರು 20 ಸಾವಿರ ಕೋಟಿಗೂ ಅಧಿಕ ಹಣವನ್ನು ವಹಿವಾಟು ಮಾಡಲಾಗುತ್ತಿದೆ. ಕೆಎಂಎಫ್ ದೇಶದಲ್ಲೇ 2ನೇ ಅತಿಹೆಚ್ಚು ಹಾಲು ಮಾರಾಟ ಮಾಡುವ ಸಂಸ್ಥೆಯಾಗಿದೆ. ಗುಜರಾತ್ ಮೂಲದ ಅಮುಲ್ ಕಂಪನಿ ಜೊತೆ ಸರಿಸಮಾನವಾಗಿ ಪೈಪೋಟಿ ನೀಡುತ್ತಿದೆ. ಇದನ್ನ ಅಮುಲ್ ಜೊತೆ ವಿಲೀನ ಮಾಡೋಕೆ ಆಗುತ್ತದಾ ಎಂದು ಸಿದ್ದರಾಮಯ್ಯ ಖಡಕ್ ಆಗಿಯೇ ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ 6 ತಿಂಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಕರ್ನಾಟಕ ಮೂಲದ ರಾಷ್ಟ್ರೀಕೃತ ಬ್ಯಾಂಕ್ಗಳಾದ ಕಾರ್ಫೋರೇಶನ್ ಬ್ಯಾಂಕ್ನ್ನು ಯುನಿಯನ್ ಬ್ಯಾಂಕ್ ಜೊತೆ ವಿಲೀನ ಮಾಡಲಾಗಿದೆ. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಿದರು. ನಾನು ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಮಾಜಿ ಸಿಎಂ ಇದೇ ವೇಳೆ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಅಮಿತ್ ಶಾ ಬೆನ್ನಲ್ಲೇ ಜೆಪಿ ನಡ್ಡಾ ರಾಜ್ಯ ಪ್ರವಾಸ: ಬಿಜೆಪಿಯಲ್ಲಿ ಗರಿಗೆದರಿದ ಚುನಾವಣಾ ಚಟುವಟಿಕೆ