ತುಮಕೂರು: ಹೆಂಡ ಮತ್ತು ಜೂಜು ಕೇಂದ್ರಗಳ ಹೆಚ್ಚಳ ರಾಜ್ಯದ ಅಭಿವೃದ್ಧಿಗೆ ಪೂರಕವಲ್ಲ ಮಾರಕವಾಗಿದೆ. ಇಂತಹ ಹೇಳಿಕೆ ನೀಡುವ ಮೂಲಕ ಬಿಜೆಪಿ ಪಕ್ಷ ತನ್ನ ರಾಷ್ಟ್ರಪೇಮವನ್ನು ಅಭಿವ್ಯಕ್ತಿಪಡಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಹೋರಾಟ ಮಾಡುವಂತಹ ಸಂದರ್ಭದಲ್ಲಿ ರೈತರಿಗೆ, ಬಡವರಿಗೆ, ಜನಸಾಮಾನ್ಯರಿಗೆ ಬಹಳ ಆಶ್ವಾಸನೆ ನೀಡಿದ್ದರು. ಆದರೆ ಈಗ ಅವರು ಅಧಿಕಾರಕ್ಕೆ ಬಂದ ಮೇಲೆ ಕಣ್ಣಿದ್ದೂ ಕುರುಡರಾಗಿದ್ದಾರೆ. ಕಿವಿಯಿದ್ದೂ ಕಿವುಡರಂತೆ ವರ್ತಿಸುತಿದ್ದಾರೆ. ಸೂಕ್ತ ನೆರೆ ಪರಿಹಾರ ವಿತರಣೆಯಾಗದೆ ವಿಕಲಚೇತನ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಪ್ರವಾಸೋದ್ಯಮ ಇಲಾಖೆಯ ಸಂಪನ್ಮೂಲ ಕ್ರೋಢೀಕರಣದ ಹಿನ್ನೆಲೆ ವಿದೇಶಿಯರ ಆಕರ್ಷಣೆಗಾಗಿ ಕ್ಯಾಸಿನೋದಂತಹ ಜೂಜು ಕೇಂದ್ರ ತೆರೆಯುವುದಾಗಿ ಸಚಿವರಾದ ಸಿ.ಟಿ.ರವಿ ಹೇಳುತ್ತಾರೆ. ಕರ್ನಾಟಕದ ಕರಾವಳಿ ತೀರ ಹಾಗೂ ಹಂಪಿ ಸೋಮನಾಥಪುರ, ಬೇಲೂರು, ಹಳೇಬೀಡಿನಂತಹ ಕಲೆ, ಪ್ರಕೃತಿ ಸಂಪತ್ತು ನಮ್ಮಲ್ಲಿರುವಾಗ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಂಡ ಕೇಂದ್ರವೇ ಬೇಕೇ? ಸರ್ಕಾರ ಇದೇ ರೀತಿ ಮುಂದುವರೆದರೆ ಜನ ನಿಮ್ಮ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಎಚ್ಚರಿಸಿದರು. ದೇಶದಲ್ಲಿ ಮನುವಾದ, ಅಂಬೇಡ್ಕರ್ ವಾದ, ಗಾಂಧಿ ವಾದ, ಗೋಡ್ಸೆ ವಾದದ ನಡುವೆ ಸಂಘರ್ಷ ಏರ್ಪಟ್ಟಿದೆ. ಕಾಂಗ್ರೆಸ್ ಅಂಬೇಡ್ಕರ್ ಮತ್ತು ಗಾಂಧಿ ವಾದ ಅನುಸರಿಸುತ್ತದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.