ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಕಾರ್ಮಿಕ ಸೇವಾ ಕೇಂದ್ರದ ಮುಂದೆ ಜಮಾಯಿಸಿದ ವಿವಿಧ ಕಾರ್ಮಿಕ ಸಂಘಟನೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು 8 ಗಂಟೆಯ ಬದಲಾಗಿ 10 ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕು ಎಂಬ ಸೂಚನೆಯನ್ನು ನೀಡಿವೆ. ಇದು ಕಾರ್ಮಿಕರ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಸೂಚನೆ ಹೊರಡಿಸಿದ ಪ್ರತಿಯನ್ನು ಸುಟ್ಟು ಹಾಕಿದರು.
ಈ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆಯ ಮುಖಂಡ ಸೈಯದ್ ಮುಜೀಬ್, ರಾಜ್ಯ ಸರ್ಕಾರ ಕೈಗಾರಿಕೆಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರು ದಿನದ 8 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಾಲ ಮಿತಿಯನ್ನು 10 ಗಂಟೆಗಳ ಕಾಲ ಹೆಚ್ಚಳ ಮಾಡಿದೆ. ಇದು ಕಾರ್ಮಿಕರಿಗೆ ಬಗೆದ ದ್ರೋಹವಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಭಾರತ ಕಾರ್ಮಿಕ ಕಾನೂನಿಗೆ ಸಹಿ ಹಾಕಿತ್ತು. ಆದರೆ ಇಂದು ಆ ಕಾಯ್ದೆಗೆ ತದ್ವಿರುದ್ಧವಾಗಿ 10 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಕಾನೂನು ಜಾರಿಗೆ ತಂದಿದೆ ಎಂದರು.
ಇನ್ನು 8 ಗಂಟೆ ಬದಲಾಗಿ 10 ಗಂಟೆಗೆ ಕೆಲಸದ ಅವಧಿಯನ್ನು ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.