ತುಮಕೂರು: ನಗರದ ಜನನಿಬಿಡ ಪ್ರದೇಶಗಳಾದ ಬಿಜಿಎಸ್ ವೃತ್ತ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಮುಂಭಾಗ ಪಾದಚಾರಿ ಮೇಲ್ಸೇತುವೆ ಏನೋ ನಿರ್ಮಾಣವಾಗಿದೆ ಆದರೆ ಇದರಿಂದ ಯಾವುದೇ ಪ್ರಯೋಜನವಾಗ್ತಿಲ್ಲ.
ನಗರದ ಮಧ್ಯ ಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ವಿಭಜಕ ಪರಿಣಾಮ ವಾಹನಗಳ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ರಸ್ತೆ ದಾಟುವುದೇ ಸಾಹಸದ ಕೆಲಸವಾಗಿತ್ತು . ಇದನ್ನು ಮನಗಂಡ ಮಹಾನಗರ ಪಾಲಿಕೆ 1.40 ಕೋಟಿ ರೂ ವೆಚ್ಚದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಎದುರು ಎಸ್ಕಲೇಟರ್ ಸ್ಕೈವಾಕ್ ನಿರ್ಮಿಸಲು ಮುಂದಾಯಿತು.
2012ರಲ್ಲಿ ಬಿಜೆಪಿ ಸರ್ಕಾರದಿಂದ ಈ ಯೋಜನೆಗೆ ಚಾಲನೆ ಕೂಡ ದೊರೆಯಿತು. ನಂತರ 2015 ರ ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿತು. 2016ರಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತು.
ಆದರೆ ಸಾರ್ವಜನಿಕರು ರಸ್ತೆದಾಟಲು ಮೇಲ್ಸೇತುವೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಕಾಮಗಾರಿ ಆರಂಭದ ಮುನ್ನ ಲಿಫ್ಟ್ ಅಳವಡಿಸಲಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಇದೀಗ ಮೇಲ್ಸೇತುವೆಗೆ ಯಾವುದೇ ಲಿಫ್ಟ್ ಅಳವಡಿಸಿಲ್ಲ.ಹೀಗಾಗಿ ವೃದ್ಧರು ಸೇರಿದಂತೆ ಜನ ಮೇಲ್ಸೇತುವೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಸಾರ್ವಜನಿಕರಿಗೆ ತಲುಪಬೇಕಾಗಿದ್ದ ಸರ್ಕಾರದ ಯೋಜನೆಗಳು ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ತಂತ್ರಜ್ಞಾನದಿಂದ ದುಬಾರಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರೂ ಬಳಕೆಗೆ ಉಪಯುಕ್ತವಾಗಿಲ್ಲ. ಸಾರ್ವಜನಿಕರು ಆತಂಕ ಹಾಗೂ ಭಯದಿಂದಲೇ ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನುಮುಂದಾದರೂ ಇಂತಹ ಅಚಾತುರ್ಯಕ್ಕೆ ಎಡೆ ಮಾಡಿಕೊಡದೇ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ತಮ್ಮ ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಿದರೆ ಇಂತಹ ಸ್ಥಿತಿ ಮರುಕಳಿಸುವುದಿಲ್ಲ.ಜೊತೆಗೆ ಜನೋಪಯೋಗಿ ಕಾರ್ಯಯೋಜನೆಗಳು ಜನರನ್ನು ಸರಿಯಾಗಿ ತಲುಪುವಲ್ಲಿ ಯಶಸ್ವಿಯಾಗಲಿವೆ.