ತುಮಕೂರು : ಆಧುನಿಕತೆಯ ಈ ಕಾಲದಲ್ಲೂ ಮೂಢನಂಬಿಕೆಯೊಂದಕ್ಕೆ ಒಂದು ತಿಂಗಳ ಮಗು ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಕಾಡುಗೊಲ್ಲ ಸಮುದಾಯದ ಕಟ್ಟುಪಾಡಿನಂತೆ ಸೂತಕ ಎಂದು ಬಾಣಂತಿ ಮತ್ತು ಮಗುವನ್ನು ಕುಟುಂಬವೊಂದು ಊರ ಹೊರಗಡೆ ಗುಡಿಸಲಿನಲ್ಲಿ ಇರಿಸಿತ್ತು. ಗುಡಿಸಿಲಿನಲ್ಲಿದ್ದಾಗ ವಿಪರೀತ ಶೀತದಿಂದ ಅನಾರೋಗ್ಯಗೊಂಡಿದ್ದ ವಸಂತ ಎಂಬವರ ಹೆಣ್ಣು ಮಗು ಸಾವಿಗೀಡಾಗಿದೆ.
ಕಳೆದ ತಿಂಗಳು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಗ್ರಾಮದ ಸಿದ್ದೇಶ ಎಂಬುವರ ಪತ್ನಿ ವಸಂತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೆರಿಗೆ ಸಂದರ್ಭದಲ್ಲಿ ಗಂಡು ಮಗು ಮೃತಪಟ್ಟಿತ್ತು. ಹೆರಿಗೆ ಮುಗಿಸಿ ನವಜಾತ ಹೆಣ್ಣು ಮಗುವಿನೊಂದಿಗೆ ಗ್ರಾಮಕ್ಕೆ ಮರಳಿ ಬಂದಿದ್ದ ವಸಂತ ಅವರನ್ನು ಸೂತಕ ಆಗಿಬರುವುದಿಲ್ಲ ಎಂದು ಊರ ಹೊರಗಿನ ಗುಡಿಸಿಲಿನಲ್ಲಿ ಇರಿಸಲಾಗಿತ್ತು. ಸಣ್ಣ ಗುಡಿಸಲು ಮಾಡಿ ಅದರಲ್ಲಿ ಬಾಣಂತಿ ಮತ್ತು ಮಗುವನ್ನು ಇರಿಸಲಾಗಿತ್ತು. ಕೆಲವು ದಿನಗಳಿಂದ ಊರ ಹೊರಗಿನ ಗುಡಿಸಲಿನಲ್ಲಿ ಬಾಣಂತಿ ಮಗುವಿನೊಂದಿಗೆ ವಾಸಿಸುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆಯಿಂದಾಗಿ ಶೀತ ವಾತಾವರಣವಿದೆ. ಮಳೆ, ಗಾಳಿಯ ನಡುವೆಯೂ ವಸಂತ ಮಗುವಿನೊಂದಿಗೆ ಗುಡಿಸಲಿನಲ್ಲಿ ವಾಸವಿದ್ದರು. ಇದರಿಂದಾಗಿ ಮಗುವಿಗೆ ವಿಪರೀತ ಶೀತ ಕಾಣಿಸಿಕೊಂಡಿದೆ. ಈ ಕಾರಣ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಅನಾರೋಗ್ಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ಐಸಿಯುನಲ್ಲಿಯೇ ಮೃತಪಟ್ಟಿದೆ. ಹೆರಿಗೆ ವೇಳೆ ಬದುಕಿದ್ದ ಮತ್ತೊಂದು ಮಗುವನ್ನು ಸಹ ತಾಯಿ ಇದೀಗ ಕಳೆದುಕೊಳ್ಳುವಂತಾಗಿದೆ.
ಸೂತಕ ಆಚರಣೆಯು ಕಾಡುಗೊಲ್ಲ ಸಮುದಾಯದ ಆಚರಣೆಗಳಲ್ಲಿ ಒಂದು. ಇಂತಹ ಆಚರಣೆಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದೆ. ಸೂತಕದ ಬಾಣಂತಿ ಊರಿಗೆ ಬಂದರೆ ದೇವರಿಗೆ ಇದು ಆಗಲ್ಲ ಎಂಬುದು ಅವರ ನಂಬಿಕೆಯಾಗಿದೆ.
ತಹಶೀಲ್ದಾರ್, ಆರೋಗ್ಯ ಅಧಿಕಾರಿಗಳ ಭೇಟಿ: ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ತುಮಕೂರು ತಹಶೀಲ್ದಾರ್ ಮತ್ತು ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿದೆ. ತಹಶೀಲ್ದಾರ್ ಸಿದ್ದೇಶ್, ಆರ್ ಸಿಎಚ್ ಮೋಹನ್, ಟಿಎಚ್ಓ ಲಕ್ಷ್ಮೀಕಾಂತ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಾಣಂತಿಯನ್ನ ಊರೊಳಗೆ ಬಿಟ್ಟುಕೊಳ್ಳುವಂತೆ ಮತ್ತು ಇಂತಹ ಮೂಢನಂಬಿಕೆಗಳನ್ನ ಬಿಡುವಂತೆ ಗ್ರಾಮದ ಹಿರಿಯರೊಂದಿಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ : ಸೂತಕದ ಸಂಪ್ರದಾಯ ಆಚರಣೆ: ಊರ ಹೊರಗಿನ ಗುಡಿಸಲೊಳಗಿಂದ ಯಾರಿಗೂ ಕೇಳಿಸದ ಬಾಣಂತಿ, ಕಂದಮ್ಮನ ಪಾಡು!