ತುಮಕೂರು : ಕ್ಷುಲಕ ಕಾರಣಕ್ಕೆ ಅತ್ತೆ, ಸೊಸೆ ಜಗಳವಾಡುತ್ತಿದ್ದ ವೇಳೆ ಮೈಮೇಲೆ ಟಿನ್ನರ್ ಸುರಿದುಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರೂ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಗಂಗಸಂದ್ರ ಗ್ರಾಮದಲ್ಲಿ ನಡೆದಿದೆ.
ಪಾರ್ವತಮ್ಮ(75), ರಾಜೇಶ್ವರಿ (45) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಸುಮಾರು 11 ಗಂಟೆ ಸಂದರ್ಭದಲ್ಲಿ ಅತ್ತೆಸೊಸೆ ಮಧ್ಯೆ ಪರಸ್ಪರ ಗಲಾಟೆಯಾಗಿದೆ. ನಿತ್ಯ ಇಬ್ಬರೂ ಗಲಾಟೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ರಾಜೇಶ್ವರಿ ಗಂಡ ಶಿವಕುಮಾರ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ಶಿವಕುಮಾರ್ ಮನೆಯಿಂದ ಹೊರಹೋದ ನಂತರ ಸೊಸೆ ಮತ್ತು ಅತ್ತೆ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಪರೀತಕ್ಕೆ ಹೋಗಿದೆ.
ಪಕ್ಕದ ಮನೆಯವರು ಗಲಾಟೆ ಬಿಡಿಸಲು ಹೋದ್ರು ಸಹ ಅತ್ತೆ ಸೊಸೆ ಕೇಳಲಿಲ್ಲ, ಗಲಾಟೆ ಮುಂದುವರೆಸಿದ್ದರು. ಅದ್ರೆ ಸ್ವಲ್ಪ ಸಮಯದ ನಂತರ ಮನೆಯ ಕಿಟಕಿ ಬಾಗಿಲುಗಳಿಂದ ಹೊಗೆ ಬಂದಾಗ ಜನರು ಗಾಬರಿಗೊಂಡು, ಬಾಗಿಲು ಬಡಿದಿದ್ದಾರೆ. ಆದರೆ ಬಾಗಿಲು ತೆರೆದಿಲ್ಲ. ನಂತರ ಅನುಮಾನಗೊಂಡ ಸ್ಥಳೀಯರು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಇಬ್ಬರೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದರು.
ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರೂ ಕೂಡಾ ಅಷ್ಟೊತ್ತಿಗಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹಗಳನ್ನು ಜಿಲ್ಲಾ ಶವಾಗಾರಕ್ಕೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.