ತುಮಕೂರು : ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ನಡೆದಿದೆ. ಹೊಸಹಳ್ಳಿ ಗ್ರಾಮದ ಸತೀಶ್(15) ಮತ್ತು ನಂದನಕುಮಾರ್(16) ಮೃತ ದುರ್ದೈವಿಗಳು.
ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಕೆರೆಯ ನೀರಿನಲ್ಲಿ ಮುಳುಗಿದ ಸತೀಶ್ ಎಂಬಾತನನ್ನು ಉಳಿಸಲು ಪ್ರಯತ್ನ ಪಟ್ಟ ನಂದನಕುಮಾರ್ ಎಂಬಾತ ಸಹ ನೀರು ಪಾಲಾಗಿದ್ದಾನೆ.
ಆತನನ್ನು ಉಳಿಸಲು ಮುಂದಾಗಿದ್ದ ಆಕಾಶ್ ಎಂಬಾತನನ್ನು ಸಂತೋಷ ಎಂಬಾತ ಹಿಂದಕ್ಕೆಳೆದಿದ್ದ. ಇದರಿಂದಾಗಿ ಮಧುಸೂದನ ಎಂಬಾತ ಸೇರಿ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಅಕ್ಕಿರಾಂಪುರ ಕೆರೆಯಲ್ಲಿ 60ಅಡಿ ಆಳವಾದ ಗುಂಡಿಯಲ್ಲಿ ಬಾಲಕರು ಮುಳುಗಿರುವುದು ಸ್ಪಷ್ಟವಾಗಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಎಎಸೈ ಯೋಗೇಶ್ ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.