ತುಮಕೂರು : ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂಟಲಗೆರೆ ಎಂಬಲ್ಲಿ ನಡೆದಿದೆ. ಮೃತ ಬಾಲಕರನ್ನು ತಿಮ್ಮನಹಳ್ಳಿಯ ರಾಕೇಶ್(14), ಧನುಷ್(15) ಎಂದು ಗುರುತಿಸಲಾಗಿದೆ. ಕೆರೆಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆ ಶಂಕೆ : ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾಗೇಟ್ ಎಚ್ಎಂಎಸ್ ಶಾಲೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಅರಳಿಮರಪಾಳ್ಯದ ನಿವಾಸಿ ಗ್ಯಾಸ್ ವಿಜಯ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಆಟೋ ಚಾಲಕನಾಗಿದ್ದ ವಿಜಯ್ ಮೃತದೇಹದ ಪಕ್ಕದಲ್ಲೇ ವಿಷದ ಬಾಟಲಿ ಪತ್ತೆಯಾಗಿದೆ. ಸ್ಥಳಕ್ಕೆ ತುಮಕೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಎತ್ತಿನಗಾಡಿ ನೊಗ ಬಡಿದು ಯುವಕ ಸಾವು : ಎತ್ತಿನಗಾಡಿ ಸ್ಪರ್ಧೆ ವೇಳೆ ನೊಗ ಬಡಿದು ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಇಂದು ನಡೆದಿದೆ. ಮೃತ ಯುವಕನನ್ನು ಅಜ್ಜಂಪುರ ನಿವಾಸಿ ಭರತ್ (25) ಗುರುತಿಸಲಾಗಿದೆ.
ಅಜ್ಜಂಪುರ ಪಟ್ಟಣದಲ್ಲಿ ಜೋಡೆತ್ತಿನ ಗಾಡಿ ಓಟದ ಸಮಿತಿ ವತಿಯಿಂದ ಎತ್ತಿನಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಸಂಜೆ ಫೈನಲ್ ರೇಸಿನ ವೇಳೆ ಭರತ್ ಎತ್ತಿನ ಗಾಡಿಯ ಸ್ಪರ್ಧೆಯ ಎಂಡ್ ಪಾಯಿಂಟ್ ಬಳಿ ನಿಂತು ಎತ್ತಿನಗಾಡಿ ಗೆರೆ ದಾಟಿದ ಬಳಿಕ ಅದರ ನೊಗ ಹಿಡಿದು ನಿಲ್ಲಿಸಲು ಮುಂದಾಗಿದ್ದಾನೆ. ಈ ವೇಳೆ, ಎತ್ತುಗಳು ವೇಗವಾಗಿ ನುಗ್ಗಿದ ಪರಿಣಾಮ ಹಿಡಿಯಲು ಹೋದ ಯುವಕನಿಗೆ ನೊಗ ತಲೆಗೆ ಬಡಿದಿದೆ. ಈ ವೇಳೆ ತೀವ್ರ ರಕ್ತ ಸ್ರಾವವಾಗಿದ್ದು ಕೂಡಲೇ ಎತ್ತಿನಗಾಡಿ ಸ್ಪರ್ಧೆ ಆಯೋಜಕರು ಹಾಗೂ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆದಾಗಲೇ ತೀವ್ರ ರಕ್ತಸ್ರಾವದಿಂದ ಭರತ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಎತ್ತಿನಗಾಡಿ ರೇಸ್ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರು: ಎತ್ತಿನಗಾಡಿ ಸ್ಪರ್ಧೆ ವೇಳೆ ನೊಗ ಬಡಿದು ಯುವಕ ಸಾವು