ತುಮಕೂರು: ಇಟ್ಟಿಗೆಗೂಡಿನಲ್ಲಿ ಚಿಮಣಿ ಕುಸಿದು ಬಿದ್ದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಿದ್ದಾಪುರ ಗೇಟ್ ಬಳಿ ನಡೆದಿದೆ.
ಮೃತ ಯುವಕರನ್ನು ಸಿದ್ದಾಪುರ ಗ್ರಾಮದ ಜಾಫರ್ (15), ಫರ್ವೀಜ್(17) ಎಂದು ಗುರುತಿಸಲಾಗಿದೆ. ಬೆಂಗಳೂರು ಮೂಲದ ಕುಮಾರ್ ಎಂಬುವರಿಗೆ ಸೇರಿದ ಇಟ್ಟಿಗೆ ಗೂಡಿನಲ್ಲಿ ಲಾಕ್ಡೌನ್ ಹಿನ್ನೆಲೆ ಯಾವುದೇ ರೀತಿಯ ಕೆಲಸಗಳು ನಡೆಯುತ್ತಿರಲಿಲ್ಲ. ಅಲ್ಲದೆ ಕಳೆದ ಎರಡು ದಿನಗಳಿಂದ ವಿಪರೀತ ಮಳೆಯಾಗಿದ್ದರಿಂದ ಇಟ್ಟಿಗೆ ಗೂಡಿನಲ್ಲಿದ್ದ ಬೃಹತ್ ಚಿಮಣಿ ಸಮೀಪದಲ್ಲಿ ಕುಳಿತಿದ್ದ ಇಬ್ಬರು ಯುವಕರ ಮೇಲೆ ಬಿದ್ದಿದೆ.
ಇದರಿಂದ ಇಬ್ಬರೂ ಯುವಕರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನು ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.