ತುಮಕೂರು : ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಎರಡನೇ ವ್ಯಕ್ತಿ ಬಲಿಯಾಗಿದ್ದಾನೆ. ಈತ ಮೃತಪಟ್ಟ ಸಂದರ್ಭದಲ್ಲಿ ಮಾರಕ ರೋಗದ ಸೋಂಕಿಗೆ ಒಳಗಾಗಿದ್ದ ವಿಚಾರ ಅವರ ಸಂಬಂಧಿಕರು ಸೇರಿದಂತೆ ಜಿಲ್ಲಾಡಳಿತಕ್ಕೂ ಗೊತ್ತಾಗಲೇ ಇಲ್ಲ.
ಯಾವುದೇ ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ನಿಯಮಗಳನ್ನು ತೆಗೆದುಕೊಂಡಿಲ್ಲ. ಇದು ಈಗ ಜಿಲ್ಲಾಳಿತಕ್ಕೆ ತಲೆನೋವು ತಂದಿಟ್ಟಿದೆ.
73 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟಾಗ ಕೋವಿಡ್ ಸೋಂಕಿನ ಗುಣಲಕ್ಷಣಗಳು ಇರಲಿಲ್ಲ. ಹೀಗಾಗಿ ಶವವನ್ನು ಆತನ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದ ಜಮೀನಿನಲ್ಲಿ ಸಾಮಾನ್ಯ ರೀತಿಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕುರಿತು ನಿಗಾ ವಹಿಸಿದ್ದು, ಕುಟುಂಬದ ನಾಲ್ವರನ್ನು ತಪಾಸಣೆಗೆ ಒಳಪಡಿಸಲಾಗಿದೆ.
ತುಮಕೂರು ನಗರದ ಕೆಎಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದ ಈ ವ್ಯಕ್ತಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮೃತ ವ್ಯಕ್ತಿಯು ಯಾವ್ದೇ ಮಸೀದಿಗೆ ನಮಾಜ್‌ಗೂ ಹೋಗುತ್ತಿರಲಿಲ್ಲ. ಕೊರೊನಾ ಗುಣಲಕ್ಷಣಗಳಾದ ನೆಗಡಿ, ಕಫ, ಕೆಮ್ಮು ಇರಲಿಲ್ಲ. ಏಪ್ರಿಲ್ 25ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲಿಗೆ ಈತನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಸೋಂಕಿನ ಯಾವ ಗುಣಲಕ್ಷಣಗಳು ಕಂಡು ಬಂದಿರಲಿಲ್ಲ. ಏಪ್ರಿಲ್ 26ರಂದು ವ್ಯಕ್ತಿಯು ಮೃತಪಟ್ಟಿದ್ದನು. ಶವಪರೀಕ್ಷೆಯ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ಪುನಃ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಯಿತು. ಆಗ ಕೋವಿಡ್19 ಸೋಂಕು ತಗುಲಿರುವುದು ದೃಢವಾಗಿದೆ. ಮತ್ತೊಮ್ಮೆ ಪರೀಕ್ಷಿಸಿದಾಗಲೂ ಸೋಂಕಿನಿಂದಲೇ ವ್ಯಕ್ತಿ ಮೃತಪಟ್ಟಿರುವುದು ಖಚಿತಪಟ್ಟಿದೆ.
ಒಟ್ಟಾರೆ ಯಾವುದೇ ರೀತಿಯಲ್ಲೂ ಅಂತ್ಯ ಸಂಸ್ಕಾರದ ವೇಳೆಯಲ್ಲಿನ ಅಗತ್ಯ ನಿಯಮಗಳನ್ನು ಪಾಲನೆ ಮಾಡದಿರುವುದು ಇದೀಗ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.