ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯ ಬಯಲುಸೀಮೆ ಪ್ರದೇಶದಲ್ಲಿ ಈ ಬಾರಿ ರೈತರು ಉಪ ಬೆಳೆಯಾಗಿ ಪುಷ್ಪ ಕೃಷಿಯತ್ತ ಮುಖ ಮಾಡಿದ್ದಾರೆ. ಈ ಮೂಲಕ ಆರ್ಥಿಕವಾಗಿ ಸಬಲರಾಗಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
ಕಳೆದ ವರ್ಷ ಕೊರೊನಾ ಸೋಂಕಿನ ನಡುವೆಯೂ ಪುಷ್ಪ ಕೃಷಿಯಲ್ಲಿ ತೊಡಗಿದ್ದರು. ಆದರೆ, ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಬಾರಿ ಕೊರೊನಾ ಹಾವಳಿ ಕಡಿಮೆಯಾದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂಗಳಿಗೆ ಉತ್ತಮ ಬೇಡಿಕೆಯಿದೆ. ಇದರಿಂದ ರೈತರು ಸಾಕಷ್ಟು ಲಾಭವನ್ನೂ ಪಡೆಯುತ್ತಿದ್ದಾರೆ.
ಉಪಬೆಳೆಯಾಗಿ ಕನಕಾಂಬರ
ಅದರಲ್ಲೂ ಮುಖ್ಯವಾಗಿ ಈ ಬಾರಿ ಸೇವಂತಿಗೆ ಹಾಗೂ ಕನಕಾಂಬರಗಳನ್ನು ಉಪಬೆಳೆಯಾಗಿ ಬೆಳೆದಿರುವ ರೈತರಿಗೆ ಹಬ್ಬ - ಹರಿದಿನಗಳಲ್ಲಿ ಇವುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಜಿಲ್ಲೆಯ ಕೊರಟಗೆರೆ ಮಧುಗಿರಿ ಹಾಗೂ ಪಾವಗಡ ತಾಲೂಕಿನ ಬಯಲುಸೀಮೆ ಪ್ರದೇಶಗಳಲ್ಲಿ ಕನಕಾಂಬರ ಹೂವು ಬೆಳೆಯುವ ರೈತರು ಹೆಚ್ಚಿನ ಆಸಕ್ತಿ ವಹಿಸಿದ್ದರು. ಮಾರುಕಟ್ಟೆಗೆ ಯಥೇಚ್ಛವಾಗಿ ಹೂವು ಮಾರಾಟಕ್ಕೆ ಬರುತ್ತಿದೆ.
ಕೆ ಜಿಗೆ 300 ರೂ.
ಕನಕಾಂಬರ ಹೂ ಕಳೆದ ವರ್ಷ ಕೆಜಿಗೆ 200 ರೂ. ಗಳಿಂದ 300 ರೂ. ಗಳವರೆಗೂ ಬಿಕರಿಯಾಗಿತ್ತು. ಈ ಬಾರಿ ಕೂಡ ಸರಾಸರಿ 300 ರೂ. ಗಳವರೆಗೂ ಮಾರಾಟವಾಗುತ್ತಿದ್ದು, ರೈತರು ತಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ರೈತರು ಕನಕಾಂಬರ ಹೂವುಗಳನ್ನು ತೆಂಗಿನ ತೋಟ ನಡುವೆ ಉಪಬೆಳೆಯಾಗಿ ಬೆಳೆಯುತ್ತಿರುವುದರಿಂದ ಹೆಚ್ಚು ಖರ್ಚು ಕೂಡ ಬರುವುದಿಲ್ಲ. ಎಕರೆಗೆ ಕನಿಷ್ಠ 30,000 ರೂ. ಖರ್ಚು ಬರುತ್ತದೆ. ಎರಡು ತಿಂಗಳ ನಂತರ ಹೂವುಗಳು ಗಿಡಗಳಲ್ಲಿ ನಳನಳಿಸುತ್ತವೆ. ನಂತರ ಮೂರು ದಿನಗಳಿಗೊಮ್ಮೆ ಹೂಗಳ ಕೊಯ್ಲು ಆರಂಭವಾಗುತ್ತದೆ. ಏನಿಲ್ಲವೆಂದರೂ ಎಕರೆಗೆ 250 ಕೆಜಿ ಹೂ ರೈತನ ಕೈ ಸೇರುತ್ತದೆ. ಇದರಿಂದಾಗಿ ಆರು ತಿಂಗಳಲ್ಲಿ ರೈತನಿಗೆ ಉತ್ತಮ ಆದಾಯ ತಂದುಕೊಡುವ ಕೃಷಿಯಾಗಿ ಕನಕಾಂಬರ ಹೂವು ರೈತನ ಕೈ ಹಿಡಿದಿದೆ ಎಂದೇ ಹೇಳ ಬಹುದಾಗಿದೆ.