ತುಮಕೂರು : ಶುಕ್ರವಾರ ಜಮ್ಮು-ಕಾಶ್ಮೀರದ ಗಡಿಯಲ್ಲಿ ನಡೆದ ಉಗ್ರರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ವೀರಮರಣವನ್ನಪ್ಪಿದ್ದ ಯೋಧ ಡಿ.ರಂಗಯ್ಯರ ಅಂತಿಮ ಸಂಸ್ಕಾರ ಪಾವಗಡ ತಾಲೂಕಿನ ಕೇಟಿಹಳ್ಳಿಯಲ್ಲಿ ನೆರವೇರಿತು.
ಕಳೆದ 38 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗ್ರಾಮದ ದಾಸಣ್ಣ ಮತ್ತು ನಾಗಮ್ಮ ದಂಪತಿಯ ಪುತ್ರ ಯೋಧ ರಂಗಯ್ಯ (57) ಆ.1 ರಂದು ಹುತಾತ್ಮರಾಗಿದ್ದರು. ರಾಜಕೀಯ ನಾಯಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ದೇಶಪ್ರೇಮ ಅಭಿಮಾನಿಗಳು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಯೋಧ ರಂಗಯ್ಯನವರ ಪಾರ್ಥೀವ ಶರೀರ ಭಾನುವಾರ ಸಂಜೆ ಬೆಂಗಳೂರಿಗೆ ಬಂದು ತಲುಪಿತ್ತು. ನಿನ್ನೆ ರಾತ್ರಿ 8 ಗಂಟೆಗೆ ಪಾವಗಡಕ್ಕೆ ಬಂದು ತಲುಪಿತ್ತು. ಭಾನುವಾರ ರಾತ್ರಿ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿತ್ತು.
ಇಂದು ಬೆಳಗ್ಗೆ 7 ಗಂಟೆಗೆ ನಿರೀಕ್ಷಣಾ ಮಂದಿರದಿಂದ ಪಾವಗಡ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಕೇಟಿಹಳ್ಳಿಗೆ ಅದ್ದೂರಿ ಮೆರವಣಿಗೆ ಮೂಲಕ ಅವರ ಪಾರ್ಥೀವ ಶರೀರವನ್ನು ಗ್ರಾಮಕ್ಕೆ ತರಲಾಯಿತು.
ನಂತರ ಗ್ರಾಮದ ಸರ್ಕಾರಿ ಹೈಸ್ಕೂಲ್ನಲ್ಲಿ ಬೆಳಗ್ಗೆನಿಂದಲು ಸಾರ್ವಜನಿಕರ ವೀಕ್ಷಣೆಗೆ ಇಟ್ಟು ನಂತರ ಮೃತ ಡಿ.ರಂಗಯ್ಯನವರ ತೋಟದಲ್ಲಿ ಸರ್ಕಾರಿ ವಿಧಿ-ವಿಧಾನದ ರೀತಿಯಲ್ಲಿ ಗೌರವ ನೀಡುವ ಮೂಲಕ ಅಂತ್ಯಸಂಸ್ಕಾರ ನಡೆಸಲಾಯಿತು. ಶ್ರೀ ಹನಮಂತನಾಥ ಸ್ವಾಮೀಜಿ, ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ, ಹೆಚ್ ವಿ ವೆಂಕಟೇಶ್, ರಂಗಗೌಡ ಸೇರಿದಂತೆ ತಾಲೂಕಿನ ವಿವಿಧ ಗಣ್ಯರು ಭಾಗವಹಿಸಿದ್ದರು.