ತುಮಕೂರು : ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಲಾಯಿತು.
ಈ ವೇಳೆ ಮಾತನಾಡಿದ ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ಯತಿರಾಜು, ಸ್ವಾತಂತ್ರ್ಯ ಹೋರಾಟದ ಆಶಯಗಳಿಗೆ ವಿರುದ್ಧವಾಗಿ ಬರುತ್ತಿರುವಂತಹ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಲಾಗುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು ಈ ಕಾಯ್ದೆಯನ್ನು ವಾಪಸ್ ಪಡೆಯದಿದ್ರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಈ ಶಾಸನದ ಪರ ಯಾವ ರಾಜಕಾರಣಿ ನಿಂತುಕೊಳ್ಳುತ್ತಾರೋ ಅವರನ್ನ ಮುಂದಿನ ಚುನಾವಣೆಗಳಲ್ಲಿ ಸೋಲಿಸುವ ಕಾರ್ಯ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಸಣ್ಣ ಹಿಡುವಳಿ ರೈತರೇ ಹೆಚ್ಚಾಗಿದ್ದಾರೆ. ಈ ಕಾಯ್ದೆಯಿಂದ ಅವರ ಬದುಕು ಬೀದಿಗೆ ಬೀಳಲಿದೆ. ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ದಲಿತರು ಅತ್ಯಂತ ಸಂಕಷ್ಟಕ್ಕೀಡಾಗುತ್ತಾರೆ. ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ, ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯುತ್ತದೆ. ಇದರಿಂದ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟು ಬೀಳಲಿದೆ. ಆಹಾರ ಭದ್ರತೆಯ ಹಕ್ಕು ನಾಶವಾಗುತ್ತದೆ. ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಬಂಡವಾಳಶಾಹಿಗಳು ಕುಲಾಂತರಿ ಬೀಜಗಳ ಬಳಕೆ, ರಾಸಾಯನಿಕ ಕೃಷಿಗೆ ಒತ್ತು ನೀಡಿ ಇಡೀ ಪರಿಸರವನ್ನೇ ನಾಶ ಮಾಡುತ್ತಾರೆ. ಹೀಗಾಗಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜಾರಿಗೆ ತರಬಾರದೆಂದು ಒತ್ತಾಯಿಸಲಾಯಿತು.