ತುಮಕೂರು: ರಾಜ್ಯಮಟ್ಟದಲ್ಲಿ ಡ್ರಗ್ಸ್ ಮಾರಾಟ ಜಾಲ ಭಾರೀ ಸದ್ದು ಮಾಡುತ್ತಿದೆ. ಜಿಲ್ಲೆಯಲ್ಲಿ ಪೊಲೀಸರು ಈ ಜಾಲದ ಇಂಚಿಂಚು ಮಾಹಿತಿ ಕಲೆಹಾಕಿ ಖದೀಮರನ್ನು ಸದೆಬಡಿಯುತ್ತಿದ್ದಾರೆ.
ಈ ವರ್ಷ ಜಿಲ್ಲೆಯಲ್ಲಿ 13 ಗಾಂಜಾ ಪ್ರಕರಣಗಳಲ್ಲಿ ಬರೋಬ್ಬರಿ 16 ಆರೋಪಿಗಳನ್ನು ಬಂಧಿಸಿದ್ದು, 30 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್, ಗಾಂಜಾ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರದ ಗಡಿ ಮೇಲೆ ತೀವ್ರ ನಿಗಾ ಇಟ್ಟು ಮಾದಕ ವಸ್ತುಗಳು ಸರಬರಾಜಾಗುವ ಜಾಲದ ಬೆನ್ನು ಹತ್ತಿದ್ದಾರೆ.
ಆಂಧ್ರ ಪ್ರದೇಶದ ವೈಜಾಗ್, ಹೈದರಾಬಾದ್ ಹಾಗೂ ಬೆಂಗಳೂರಿನಿಂದ ಡ್ರಗ್ಸ್ ಸರಬರಾಜಾಗುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಡ್ರಗ್ಸ್ ದಂಧೆಯನ್ನು ಮಟ್ಟಹಾಕಲು ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಇನ್ನು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕೊರಟಗೆರೆ, ಮಧುಗಿರಿ, ಶಿರಾ ತಾಲೂಕಿನಲ್ಲಿ ಗಾಂಜಾ ವಾಸನೆ ಹರಡಿದೆ. ಇದುವರೆಗಿನ ಕಾರ್ಯಾಚರಣೆಯಲ್ಲಿ ಬಂಧಿತರಾಗಿರುವ ಆರೋಪಿಗಳು ಡ್ರಗ್ಸ್ ಜಾಲದ ಕೊನೆ ಹಂತದವರಾಗಿದ್ದಾರೆ. ಅಲ್ಲದೆ ಮೂಲ ಆರೋಪಿಗಳನ್ನು ಬಲೆಗೆ ಕೆಡವಲು ಪೊಲೀಸರು ರಣತಂತ್ರ ರೂಪಿಸಿದ್ದಾರೆ.