ತುಮಕೂರು: ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಲಂಚ ಪಡೆದ ಆರೋಪದ ಹಿನ್ನೆಲೆ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪಾವಗಡ ಪುರಸಭೆ ಕಿರಿಯ ಅಭಿಯಂತರ ಹಾಗೂ ವಾಟರ್ಮ್ಯಾನ್ ಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಪಾವಗಡ ಪುರಸಭೆ ಕಿರಿಯ ಅಭಿಯಂತರ ಪ್ರಕಾಶ್ ಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 4ಲಕ್ಷ ರೂ. ದಂಡ ಮತ್ತು ವಾಟರ್ಮನ್ ರಿಯಾಜ್ ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡವನ್ನು ನ್ಯಾಯಾಧೀಶರು ವಿಧಿಸಿದ್ದಾರೆ.
2016 ರ ಸೆಪ್ಟಂಬರ್ 8 ರಂದು ಲಿಂಗಮಯ್ಯ ಎಂಬುವರು ತುಮಕೂರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ನೀಡಿದ್ದರು. ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕಾಮಗಾರಿಗಳ ಬಿಲ್ ಮಂಜೂರು ಮಾಡುವ ಸಲುವಾಗಿ 7 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟು, ಮುಂಗಡವಾಗಿ 3 ಲಕ್ಷ ರೂ. ಹಣವನ್ನು ಪಡೆದುಕೊಂಡು ಉಳಿದ 4 ಲಕ್ಷ ರೂ. ಹಣಕ್ಕಾಗಿ ಆರೋಪಿಗಳು ಲಿಂಗಮಯ್ಯ ಅವರಿಗೆ ಬೇಡಿಕೆ ಇಟ್ಟಿದ್ದರು. ಕಿರಿಯ ಅಭಿಯಂತರ ಪ್ರಕಾಶ್ ಅವರು 1 ಲಕ್ಷ ರೂ. ಲಂಚದ ಹಣ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ಸಿಕ್ಕಿಬಿದ್ದಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಸ್. ಸುಧೀಂದ್ರನಾಥ್ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.