ತುಮಕೂರು: ವೈದ್ಯರ ಸಲಹಾ ಚೀಟಿಯಿಲ್ಲದೆ ಜ್ವರ, ಶೀತ, ಕೆಮ್ಮು ಹಾಗೂ ಐಎಲ್ಐಗೆ ಸಂಬಂಧಪಟ್ಟಂತಹ ಯಾವುದೇ ಔಷಧಗಳನ್ನು ಮಾರಾಟ ಮಾಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಔಷಧ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾ ಔಷಧ ವ್ಯಾಪಾರಸ್ಥರ ಸಭೆ ನಡೆಸಿ ಮಾತನಾಡಿದ ಅವರು, ಮೆಡಿಕಲ್ ಸ್ಟೋರ್ಗಳಲ್ಲಿ ಔಷಧ ಕೊಳ್ಳಲು ಬರುವ ರೋಗಿ ಮತ್ತು ಅವರನ್ನು ತಪಾಸಣೆ ಮಾಡಿರುವ ವೈದ್ಯರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಬೇಕು. ಅಲ್ಲದೆ ಈ ಮಾಹಿತಿಯನ್ನು ಸರ್ಕಾರ ನೀಡಿರುವ ವೆಬ್ಸೈಟ್ನಲ್ಲಿ ನಮೂದಿಸಬೇಕೆಂದು ಸೂಚಿಸಿದರು.
ಒಂದು ವೇಳೆ ವೈದ್ಯರ ಸಲಹಾ ಚೀಟಿಯಿಲ್ಲದೆ ಔಷಧಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಅಂತವರ ವಿರುದ್ಧ ಎಪಿಡೆಮಿಕ್ ಆ್ಯಕ್ಟ್ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಿ ಪರವಾನಗಿಗಳನ್ನ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.