ತುಮಕೂರು : ಈ ಬಾರಿ ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲಾ ವಿದ್ಯಾರ್ಥಿಗಳೇನೋ ತೇರ್ಗಡೆಯಾಗಿದ್ದಾರೆ. ಆದರೆ, ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಪದವಿ ಕಾಲೇಜುಗಳಲ್ಲಿ ಪ್ರವೇಶ ನೀಡುವುದು ಕಠಿಣ ಸವಾಲಾಗಿ ಪರಿಣಮಿಸಿದೆ.
ಕಳೆದ ವರ್ಷದ 18 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ರು. ಆದರೆ, ಈ ವರ್ಷ ಬರೋಬ್ಬರಿ 28 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ವರ್ಷಕ್ಕಿಂತ 10 ಸಾವಿರ ವಿದ್ಯಾರ್ಥಿಗಳು ಹೆಚ್ಚುವರಿಯಾಗಿದ್ದಾರೆ. ಪರಿಣಾಮ ಪದವಿ ಪ್ರವೇಶಕ್ಕೆ ಬಂದವರಿಗೆಲ್ಲ ಹೇಗೆ ಪ್ರವೇಶ ಕಲ್ಪಿಸಬೇಕು ಎಂಬ ಸಮಸ್ಯೆ ಎದುರಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ದ್ವಿತೀಯ ಪಿಯುಸಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿದೆ. ಅದರ ಪರಿಣಾಮ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ಪದವಿ ಶಿಕ್ಷಣಕ್ಕೆ ಹೇಗೆ ಪ್ರವೇಶ ಕಲ್ಪಿಸೋದು ಎಂಬ ಆತಂಕ ಶುರುವಾಗಿದೆ. ಕಳೆದ ವರ್ಷ 14,404 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಈ ವರ್ಷ ಈ ಸಂಖ್ಯೆ 27,365ಕ್ಕೆ ಏರಿಕೆಯಾಗಿದೆ.
ಅದರಲ್ಲಿ ಕಲಾ ವಿಭಾಗದಲ್ಲಿ 6,891 (ಹಿಂದಿನ ವರ್ಷ 2,274), ವಾಣಿಜ್ಯ ವಿಭಾಗದಲ್ಲಿ 11561 (ಹಿಂದಿನ ವರ್ಷ 6449), ವಿಜ್ಞಾನದಲ್ಲಿ 8913 (ಹಿಂದಿನ ವರ್ಷ 5681) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ಕೆಲವರು ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ.
ಉಳಿದವರು ಪದವಿ ವಿಜ್ಞಾನ ಅಧ್ಯಯನಕ್ಕೆ ಮುಂದಾಗುತ್ತಾರೆ. ವಿಜ್ಞಾನ ಕೋರ್ಸ್‌ಗಳ ಅಧ್ಯಯನಕ್ಕೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಆದರೆ ಕಲಾ, ವಾಣಿಜ್ಯ ವಿಭಾಗದವರು ಅದೇ ವಿಷಯಗಳಲ್ಲಿ ಅಧ್ಯಯನ ಮುಂದುವರಿಸಬೇಕಾಗುತ್ತದೆ. ಕಲಾ ವಿಭಾಗದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರುಪಟ್ಟು ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎರಡು ಪಟ್ಟು ಹೆಚ್ಚು ಮಂದಿ ಪಾಸಾಗಿದ್ದು, ಪ್ರವೇಶ ಬಯಸಿದ್ದಾರೆ.
ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಇರುವ ಮೂಲಸೌಕರ್ಯ, ಪ್ರವೇಶ ಸಾಮರ್ಥ್ಯ, ಬೋಧಕರ ಸಂಖ್ಯೆ ಮೊದಲಾದ ವಿಚಾರಗಳನ್ನು ಗಮನಿಸಿದರೆ ಪ್ರವೇಶ ಬಯಸಿ ಬರುವ ಎಲ್ಲರಿಗೂ ಅವಕಾಶ ಕಲ್ಪಿಸುವುದು ಕಷ್ಟಕರವಾಗಲಿದೆ. ಮೂಲಸೌಕರ್ಯ ಹೆಚ್ಚಿಸಿಕೊಂಡರಷ್ಟೇ ಪ್ರವೇಶ ನೀಡುವುದರ ಜತೆಗೆ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ 97 ಪದವಿ ಕಾಲೇಜುಗಳಿವೆ. ಹಿಂದಿನ ವರ್ಷ ತೇರ್ಗಡೆಯಾಗಿದ್ದ 14,404 ವಿದ್ಯಾರ್ಥಿಗಳಲ್ಲಿ 11,627 ಮಂದಿ ವಿವಿಧ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರು. ವಿವಿ ವ್ಯಾಪ್ತಿ ಕಾಲೇಜುಗಳಲ್ಲಿ 1236, ಸರ್ಕಾರಿ ಕಾಲೇಜುಗಳಲ್ಲಿ 6003, ಅನುದಾನಿತ ಕಾಲೇಜುಗಳಲ್ಲಿ 2,267, ಅನುದಾನ ರಹಿತ ಕಾಲೇಜುಗಳಲ್ಲಿ 1760, ಸ್ವಾಯತ್ತ ಸಂಸ್ಥೆ ಕಾಲೇಜಿನಲ್ಲಿ 361ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದರು.
ಈ ವರ್ಷ ತೇರ್ಗಡೆಯಾಗಿರುವ 27 ಸಾವಿರದಲ್ಲಿ ವೃತ್ತಿಪರ ಕೋರ್ಸ್ ಹೊರತುಪಡಿಸಿದರೆ ಸುಮಾರು 20 ಸಾವಿರ ವಿದ್ಯಾರ್ಥಿಗಳಾದರೂ ಪ್ರವೇಶ ಬಯಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಸಂಖ್ಯೆಯ ಮಕ್ಕಳಿಗೆ ಅವಕಾಶ ಮಾಡಿಕೊಡಬೇಕಾಗಿದೆ.
ನಗರ ಹೊರತುಪಡಿಸಿದರೆ ಬಹುತೇಕ ಕಾಲೇಜುಗಳಲ್ಲಿ ಸಾಮರ್ಥ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದರು. ಇನ್ನೂ ಶೇ. 30ರಷ್ಟು ಸೀಟುಗಳು ಉಳಿದುಕೊಂಡಿದ್ದವು. ಹಾಗಾಗಿ ಈ ವರ್ಷ ಕಾಲೇಜುಗಳು ಭರ್ತಿಯಾಗಲಿವೆ. ಹೆಚ್ಚುವರಿಯಾದರೆ ಮುಂದೆ ಏನು ಮಾಡಬೇಕು ಎಂಬ ಚಿಂತೆ ಎದುರಾಗಿದೆ.
ವಿವಿ ಉಪಕುಲಪತಿ ಪ್ರೊ.ವೈ ಎಸ್ ಸಿದ್ದೇಗೌಡ ಪ್ರತಿಕ್ರಿಯೆ : ಪ್ರವೇಶ ಬಯಸಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗುವುದು. ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಇರುವ ಕಲಾ ಕಾಲೇಜಿನಲ್ಲಿ ಪಾಳಿ ಆಧಾರದ ಮೇಲೆ ತರಗತಿಗಳು ನಡೆಯುತ್ತಿವೆ. ಬೆಳಗ್ಗೆ 8ರಿಂದ 12.30 ಹಾಗೂ ಮಧ್ಯಾಹ್ನ 12.30 ರಿಂದ 5.30ರವರೆಗೆ ಎರಡು ಪಾಳಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಪ್ರವೇಶ ಹೆಚ್ಚಾದರೆ ಇತರೆ ಕಾಲೇಜುಗಳಲ್ಲೂ ಇದೇ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ತುಮಕೂರು ವಿವಿ ಉಪಕುಲಪತಿ ಪ್ರೊ.ವೈ ಎಸ್ ಸಿದ್ದೇಗೌಡ ತಿಳಿಸಿದ್ದಾರೆ. ಅಗತ್ಯ ಇರುವೆಡೆ ಮೂಲಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಅತಿಥಿ ಉಪನ್ಯಾಸಕರ ನೇಮಕಕ್ಕೂ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.