ತುಮಕೂರು: ಕೊರೊನಾ ಸೋಂಕಿನ ಹಾವಳಿ ಜಿಲ್ಲೆಯಲ್ಲಿ 2020ನೇ ವರ್ಷ ಅಪಾರ ಬದಲಾವಣೆ ತಂದಿಟ್ಟಿತು. ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಮಾರುಕಟ್ಟೆ ಮೇಲೆ ಭಾರಿ ಹೊಡೆತ ಬಿದ್ದಿತು. ಮುಂಬೈನಲ್ಲಿ ಸುದೀರ್ಘ ಅವಧಿಯ ಲಾಕ್ಡೌನ್ನಿಂದಾಗಿ ಕೊಬ್ಬರಿ ರಫ್ತು ಆಗದೆ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.
ಒಂದೆಡೆ ಕೊರೊನಾ ಮತ್ತೊಂದೆಡೆ ಚಿರತೆ ಹಾವಳಿ ಜಿಲ್ಲೆಯ ಜನರ ನಿದ್ದೆಗೆಡಿಸಿತ್ತು. ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗಾರರಿಗೆ ನಿರಾಶೆ ತಂದರೆ ಕಟಾವು ಹಂತದಲ್ಲಿ ಮಳೆ ಬಂದ ಕಾರಣ ರಾಗಿ ಬೆಳೆ ಸಾಕಷ್ಟು ನಷ್ಟ ಅನುಭವಿಸಿತು. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ರಾಜ್ಯಮಟ್ಟಕ್ಕೆ ಹೋಲಿಕೆ ಮಾಡಿದ್ರೆ, ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟರು. ಶಿರಾ ಶಾಸಕ ಬಿ. ಸತ್ಯನಾರಾಯಣ ಸಾವು ಸಹ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿತು.
ಮುಖ್ಯವಾಗಿ ಬಹುದಿನಗಳ ನಿರೀಕ್ಷೆಯಾಗಿದ್ದ ಮದಲೂರು ಕೆರೆಗೆ ನೀರು ಹರಿದದ್ದು, ಉತ್ತಮ ಮುಂಗಾರು ಮಳೆಯ ಹಿನ್ನೆಲೆ ಕಲ್ಪತರು ಜಿಲ್ಲೆಗೆ ಸಮೃದ್ಧವಾಗಿ ಹರಿದ ಹೇಮಾವತಿ ನೀರು, ಪಾವಗಡ ತಾಲ್ಲೂಕಿನ ಉತ್ತರ ಪಿನಾಕಿನಿ ಮೂಲಕ ಆಂಧ್ರಪ್ರದೇಶದ ಪೇರೂರು ಅಣೆಕಟ್ಟೆಗೆ ನೀರು ಹರಿಸುವ ಯೋಜನೆಗೆ ಶಂಕುಸ್ಥಾಪನೆ, ಜಿಲ್ಲೆಯ 5 ಮಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ದೊರೆತದ್ದು ಮತ್ತು ರಾಜ್ಯ ಮಟ್ಟದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದ್ದು ಗಮನಾರ್ಹ ಅಂಶವಾಗಿದೆ.
ಮಾನವ ಮತ್ತು ಚಿರತೆ ನಡುವಿನ ಸಂಘರ್ಷ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಜಿಲ್ಲೆಯ ಕುಣಿಗಲ್, ಗುಬ್ಬಿ, ತುಮಕೂರು ತಾಲೂಕಿನ ವ್ಯಾಪ್ತಿಯಲ್ಲಿ ಜನ ಜಾನುವಾರುಗಳನ್ನು ಬಲಿ ತೆಗೆದುಕೊಂಡದ್ದು ಚಿರತೆಗಳು. ಇದು ಸಾಕಷ್ಟು ಚರ್ಚೆಗೂ ಒಳಗಾಯಿತು. 2020ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಐದು ಮಂದಿ ಚಿರತೆ ದಾಳಿಗೆ ಬಲಿಯಾದರು. ಪ್ರತಿ ದಿನ ಒಂದಿಲ್ಲೊಂದು ಕಡೆ ಚಿರತೆಗಳು ಪ್ರತ್ಯಕ್ಷವಾಗಿ ಜನರನ್ನು ಭೀತಿಗೊಳಿಸಿದವು.
ಶಿರಾ ವಿಧಾನಸಭೆ ಕ್ಷೇತ್ರದ ಶಾಸಕ ಬಿ. ಸತ್ಯನಾರಾಯಣ ಅಕಾಲಿಕ ಮರಣದಿಂದ ಎದುರಾದ ಉಪಚುನಾವಣೆ ಮಾತ್ರ ರಾಜ್ಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವಿನ ನಗೆ ಬೀರಿತು. ಇದು ಜಿಲ್ಲೆಯ ಜೆಡಿಎಸ್ ಪಾಳಯಕ್ಕೆ ತೀವ್ರ ಆಘಾತ ನೀಡಿತು. ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಆ ಪಕ್ಷ ಶಾಸಕರ ಸಂಖ್ಯೆಯನ್ನು ಐದಕ್ಕೆ ಹೆಚ್ಚಿಸಿಕೊಂಡಿತು. ಎಲ್ಲಕ್ಕಿಂತ ಮುಖ್ಯವಾಗಿ ತಳಮಟ್ಟದಲ್ಲಿ ಕಾರ್ಯಕರ್ತರೇ ಇಲ್ಲದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಅಚ್ಚರಿ ಮೂಡಿಸಿತು. ಕಾಂಗ್ರೆಸ್ನ ರಾಜ್ಯ ಮಟ್ಟದ ಪ್ರಭಾವಿ ನಾಯಕ ಟಿ.ಬಿ. ಜಯಚಂದ್ರ ಸೋಲುಕಂಡರು.
ಜಿಲ್ಲೆಯ ಇತಿಹಾಸದಲ್ಲಿಯೇ ಐದು ಮಂದಿಗೆ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನ ದೊರೆತದ್ದರಿಂದ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು. ಶಾಸಕ ಬಿ.ಸಿ. ನಾಗೇಶಗೆ ಕಾರ್ಮಿಕ ಕಲ್ಯಾಣ ಮಂಡಳಿ, ಶಾಸಕ ಎ.ಎಸ್. ಜಯರಾಂ ಸಾಂಬಾರು ಅಭಿವೃದ್ಧಿ ಮಂಡಳಿ, ಎಸ್.ಆರ್. ಗೌಡ ಅವರಿಗೆ ರೇಷ್ಮೆ ಅಭಿವೃದ್ಧಿ ಮಂಡಳಿ, ಕೆ.ಎಸ್. ಕಿರಣ್ ಕುಮಾರ್ ಅವರಿಗೆ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬಿ.ಕೆ. ಮಂಜುನಾಥರಿಗೆ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ದೊರೆಯಿತು.
ಸಾಧಕರು: ಚಲನಚಿತ್ರ ಕ್ಷೇತ್ರದಲ್ಲಿನ ಸಾಧನೆಗಾಗಿ ಹಿರಿಯ ಛಾಯಾಗ್ರಾಹಕ ತಿಪಟೂರಿನ ಬಿ.ಎಸ್. ಬಸವರಾಜು ಹಾಗೂ ಕ್ರೀಡಾ ಕ್ಷೇತ್ರದಲ್ಲಿನ (ವಾಲಿಬಾಲ್ ತರಬೇತಿ) ಸಾಧನೆಗಾಗಿ ಗುಬ್ಬಿ ತಾಲ್ಲೂಕು ಕಲ್ಲೂರು ಕ್ರಾಸ್ ಬಳಿಯ ಕುಣಾಘಟ್ಟದ ನಿವಾಸಿ ಎಚ್.ಬಿ. ನಂಜೇಗೌಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಈ ಇಬ್ಬರು ಸಾಧಕರು ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಪ್ರಚುರ ಪಡಿಸಿದರು.
ಅಪರಾಧ ಕೃತ್ಯಗಳಿಗೆ ಕಡಿವಾಣ: ಕುಣಿಗಲ್, ತುಮಕೂರು, ಗುಬ್ಬಿ ಮತ್ತು ಕೆ.ಬಿ. ಕ್ರಾಸ್ ವ್ಯಾಪ್ತಿಯಲ್ಲಿ ಸ್ಕಿಮ್ಮಿಂಗ್ ಸಾಧನದ ಮೂಲಕ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ವಾಸಿಗಳಾದ ಉಗಾಂಡಾ ದೇಶದ ಐವಾನ್ ಕಾಬೊಂಗೆ ಮತ್ತು ಕೀನ್ಯಾದ ಲಾರೆನ್ಸ್ ಮಾಕಾಮುನನ್ನು ಜಿಲ್ಲೆಯ ಪೊಲೀಸರು ಬಂಧಿಸಿದರು. ಇದು ಈ ವರ್ಷದ ಬಹುದೊಡ್ಡ ಅಪರಾಧ ಪ್ರಕರಣಗಳಲ್ಲಿ ಒಂದಾಗಿತ್ತು. ಅದೇ ರೀತಿ ತುಮಕೂರು ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ನಿರಂತರವಾಗಿ ಮುಂದುವರೆದಿತ್ತು. ಇದು ಜಿಲ್ಲಾ ಪೊಲೀಸ್ ಇಲಾಖೆಗೆ ಭಾರಿ ತಲೆನೋವು ತರಿಸಿತ್ತು.
ಈ ನಡುವೆಯೂ ಪೊಲೀಸ್ ಇಲಾಖೆ ಬೀಗ ಹಾಕಿದ ಮನೆಗಳಲ್ಲಿ ನಡೆಯುವ ಕಳ್ಳತನ ತಡೆಯಲು ‘ಲಾಕ್ಹೌಸ್ ಮಾನಿಟರಿಂಗ್ ಸಿಸ್ಟಮ್ ಮೊಬೈಲ್ ಅಪ್ಲಿಕೇಷನ್ (ಎಲ್ಎಚ್ಎಂಎಸ್) ಜಾರಿಗೊಳಿಸಿತು. ಈ ಯೋಜನೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ತುಮಕೂರು ನಗರದಲ್ಲಿ ಜಾರಿಯಾಯಿತು. ಅಲ್ಲದೆ ಅದನ್ನು ಜಿಲ್ಲಾದ್ಯಂತ ವಿಸ್ತರಿಸಲು ಸಿದ್ದತೆ ನಡೆದಿದೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್. ರಾಜಣ್ಣ ನಾಲ್ಕನೇ ಬಾರಿಗೆ ಮರು ಆಯ್ಕೆಗೊಂಡರು. ಆಗ್ನೇಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿರಾದ ಚಿದಾನಂದ ಗೌಡ ಗೆಲುವು, ಶಿರಾ ತಾಲ್ಲೂಕು ಮದಲೂರು ಕೆರೆಗೆ ಹೇಮಾವತಿ ನೀರು ಹರಿದಿದ್ದು, ಕುಣಿಗಲ್ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಎಸ್.ಎನ್.ದೇವರಾಜೇಗೌಡ ಅವರು ಕೇಂದ್ರ ಸರ್ಕಾರದ ಸೇವಾ ಪ್ರಶಸ್ತಿಗೆ ಭಾಜನರಾದುದು, ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದ 21ನೇ ಗುರುವಾಗಿ ಶಿವಯೋಗಿ ಸ್ವಾಮೀಜಿ ನೇಮಕ ಪ್ರಮುಖ ಘಟನಾವಳಿಗಳಾಗಿವೆ.
ತೋವಿನಕೆರೆ ಸಮೀಪದ ಸಿದ್ಧರಬೆಟ್ಟದಲ್ಲಿ ಕಾಗಿನೆಲೆ ಸಂಸ್ಥಾನದ ಕನಕ ಗುರುಪೀಠ ಆರಂಭ, ತುಮಕೂರು ಮಹಾನಗರ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ನ ಫರೀದಾ ಬೇಗಂ ಹಾಗೂ ಜೆಡಿಎಸ್ನ ಶಶಿಕಲಾ ಗಂಗಹನುಮಯ್ಯ ಉಪಮೇಯರ್ ಆಗಿ ಆಯ್ಕೆಯಾಗಿದ್ದು ಗಮನಾರ್ಹವಾಗಿವೆ.
ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿದುಹಾಕಲಾಯಿತು. ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆಗೆ ಐದು ಸಾವಿರಕ್ಕೂ ಹೆಚ್ಚು ಮರಗಳನ್ನು ನೆಲಕ್ಕುರುಳಿಸಲಾಯಿತು. ಜಿಲ್ಲೆಯಲ್ಲಿ ಹಾದು ಹೋಗುವ ಬಳ್ಳಾರಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ಅಭಿವೃದ್ಧಿಪಡಿಸಲು ಹುಳಿಯಾರಿನಿಂದ ಚಿಕ್ಕನಾಯಕನಹಳ್ಳಿ ಹಾಲುಗೊಣದವರೆಗೆ ಒಟ್ಟು 1752 ಮರಗಳು ಹಾಗೂ ಹಾಲುಗೊಣದಿಂದ ಕೆ.ಬಿ. ಕ್ರಾಸ್ ಬಳಿಗೆ 179 ಮರಗಳನ್ನು ಕಡಿಯಲಾಯಿತು. ಇದು ಪರಿಸರವಾದಿಗಳ ಆಕ್ರೋಶಕ್ಕೂ ತುತ್ತಾಗಿತ್ತು.