ತುಮಕೂರು : ಯಡಿಯೂರಪ್ಪ ಚುನಾವಣೆ ಸಂದರ್ಭದಲ್ಲಿ ಮದಲೂರು ಕೆರೆಗೆ ನೀರು ಹರಿಸುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಇದೀಗ ಕೆರೆ ವ್ಯಾಪ್ತಿಯ ನಾಲೆಗಳಲ್ಲಿ ಕೆಲಸಗಳು ಭರದಿಂದ ನಡೆಯುತ್ತಿವೆ. ಆದರೆ, ಕೆರೆಗಳಿಗೆ ಅವೈಜ್ಞಾನಿಕವಾಗಿ ನೀರನ್ನು ಹರಿಸಲಾಗುತ್ತಿದೆ ಅಂತಾ ಜಿಲ್ಲೆಯ ಕೆಲ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರವು ಕೃಷ್ಣಾ ಜಲಾನಯನ ವ್ಯಾಪ್ತಿಗೆ ಒಳಪಡಲಿದ್ದು, ಕಾವೇರಿ ಜಲಾನಯನ ವ್ಯಾಪ್ತಿಯಿಂದ ಹೇಮಾವತಿ ನದಿ ನೀರನ್ನು ಹರಿಸುವುದು ಸರಿಯಲ್ಲ. ಇದಕ್ಕೆ ಸಂಪೂರ್ಣ ವಿರೋಧವಿದೆ ಎಂದು ಕಾಂಗ್ರೆಸ್ ಶಾಸಕ ಡಾ. ರಂಗನಾಥ ಪ್ರತಿಪಾದಿಸುತ್ತಿದ್ದಾರೆ.
ಈಗಾಗಲೇ 900 ಎಂಸಿಎಫ್ಟಿ ನೀರನ್ನು ತೆಗೆದುಕೊಂಡು ಹೋಗಿರುವುದೇ ತಪ್ಪು. ಯಾವುದೇ ಕಾರಣಕ್ಕೂ ಹೇಮಾವತಿ ನದಿ ನೀರನ್ನು ಮದಲೂರು ಕೆರೆಗೆ ಹರಿಸಲು ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನೂತನ ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ರಾಜೇಶ್ ಗೌಡ ಈಗಾಗಲೇ ಮದಲೂರು ಕೆರೆಯ ನೀರು ಹರಿಸುವ ಕುರಿತಂತೆ ನಡೆದಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಪೂರ್ವನಿಗದಿಯಂತೆ ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಳ್ಳಂಬೆಳ್ಳ ಕೆರೆಗೆ 150 ಎಂಸಿಎಫ್ಟಿ ನೀರನ್ನು ಹರಿಸಲಾಗಿದೆ.
ಇನ್ನೂ ಹೆಚ್ಚುವರಿ ನೀರು ಹರಿದ ನಂತರ ಅಲ್ಲಿಂದ ನಾಲೆಗಳ ಮೂಲಕ ಮದಲೂರು ಕೆರೆಗೆ ತುಂಬಿಸಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಹೇಮಾವತಿ ನೀರು ಮದಲೂರು ಕೆರೆಗೆ ಹರಿದು ಬರಲಿದೆ ಎಂದು ಶಾಸಕ ಡಾ. ರಾಜೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಬಿಜೆಪಿ ಆಶ್ವಾಸನೆ ನೀಡಿದಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಸಿದ್ಧತೆ ನಡೆಸಿದ್ರೆ, ಇನ್ನೊಂದೆಡೆ ಕಾಂಗ್ರೆಸ್ ಶಾಸಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.