ತುಮಕೂರು: ಅಪಘಾತ ಪ್ರಕರಣದಲ್ಲಿ ಮೂವರು ಸಾವಿಗೀಡಾಗಿದ್ದರು. ಅದರಂತೆ ಈ ಆರೋಪಿ ಜೈಲು ಪಾಲಾಗಿದ್ದ. ನಂತರ ಜಾಮೀನಿನ ಮೇಲೆ ಹೊರಬಂದ ಈತ ಬರೋಬ್ಬರಿ 16 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಈಗ ಪೊಲೀಸರು ಮತ್ತೆ ಆತನನ್ನು ಪತ್ತೆ ಮಾಡಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಲಾರಿ ಚಾಲಕನನ್ನು ಶಿರಾ ಗ್ರಾಮಾಂತರ ಪೊಲೀಸರು ಮುಂಬೈನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ರಾಮದಾರ್ ಜೈಸ್ವಾರ್ ಎಂಬಾತನೇ ಬಂಧಿತ ಆರೋಪಿ, ಖಚಿತ ಮಾಹಿತಿ ಮೇರೆಗೆ ಶಿರಾ ಪೊಲೀಸರು ಮುಂಬೈನ ಪವನ್ ನಗರದ ಶುಕ್ಲ ಕಾಂಪೌಂಡ್ ಪ್ರದೇಶದಲ್ಲಿ ಪತ್ತೆ ಮಾಡಿದ್ದಾರೆ.
ಏನಿದು ಘಟನೆ?
2006ರ ಮೇ 3ರಂದು ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯರಗುಂಟೆಶ್ವರ ನಗರದ ಸಮೀಪ ಶಿರಾ ಹಿರಿಯೂರು ಎನ್ ಎಚ್ 4 ರಸ್ತೆಯಲ್ಲಿ ಶಿರಾ ಕಡೆಯಿಂದ ಬಂದ ಟೆಂಪೋಟ್ರಾಕ್ಸ್ ಜನರನ್ನು ಇಳಿಸುತ್ತಿತ್ತು. ಆಗ ಆ ವೇಳೆ ಲಾರಿಯು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಹಾಗೆ 9 ಮಂದಿ ಗಾಯಗೊಂಡಿದ್ದರು.
ಈ ಸಂಬಂಧ ಲಾರಿ ಚಾಲಕ ರಾಮದಾರ್ ಜೈಸ್ವಾರ್ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ.
ಜಾಮೀನು ಪಡೆದವನೇ ತಲೆ ಮರೆಸಿಕೊಂಡಿದ್ದನು. ಅಲ್ಲದೆ ಆರು ವರ್ಷಗಳ ಕಾಲ ಆರೋಪಿ ಪತ್ತೆಯಾಗದ ಕಾರಣ ನ್ಯಾಯಾಲಯವು 2012ರ ಡಿ.22 ರಂದು ಪ್ರಕರಣದ ವಿಚಾರಣೆ ಸ್ಥಗಿತಗೊಳಿಸಿತ್ತು. ನಂತರ ವಿಶೇಷ ಪತ್ತೆ ತಂಡವು ಆರೋಪಿಯನ್ನು ಪತ್ತೆ ಮಾಡುವ ಕಾರ್ಯದಲ್ಲಿದ್ದಾಗ ಆತನ ವಿಳಾಸ ಸಿಕ್ಕಿದೆ. ಇದಾದ ನಂತರ ಚಾಲನಾ ಪರವಾಗಿ ಪರಿಶೀಲನೆ ನಡೆಸಿ ಮತ್ತು ತಾಂತ್ರಿಕ ಮಾಹಿತಿ ಮೇರೆಗೆ ತಂಡ ಸಆರೋಪಿಯ ಊರಾದ ಉತ್ತರ ಪ್ರದೇಶದ ಆಜಮ್ ನಗರ ಜಿಲ್ಲೆಯ ದೇವಲಾಸ್ಪುರ ಗ್ರಾಮಕ್ಕೆ ತೆರಳಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆರೋಪಿಯ ಸಂಬಂಧಿಕರು ಮತ್ತು ಗ್ರಾಮಸ್ಥರ ಮಾಹಿತಿ ಮೇರೆಗೆ ಆರೋಪಿ ಮುಂಬೈನಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ನಂತರ ಮುಂಬೈನ ಪವನ್ ನಗರದ ಶುಕ್ಲ ಕಾಂಪೌಂಡ್ ಪ್ರದೇಶದಲ್ಲಿ ಈತ ಪತ್ತೆಯಾಗಿದ್ದಾನೆ.