ತುಮಕೂರು: ದೇಶಕ್ಕೆ ತ್ರಿವಿಧ ದಾಸೋಹ ನೀಡುತ್ತಿರುವ ನಾಡಿನ ಪ್ರಸಿದ್ಧ ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಇಂದು ಸರಳವಾಗಿ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಮಠದ ಉತ್ತರಾಧಿಕಾರಿಗೆ ನೂತನ ಅಭಿದಾನ ನೀಡಲಾಯಿತು. ಈ ಮೂಲಕ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಶಿವ ಸಿದ್ದೇಶ್ವರವ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಮನೋಜ್ ಕುಮಾರ್) ಎಂದು ಘೋಷಣೆ ಮಾಡಲಾಯಿತು.
ಮೂವರಿಗೆ ಉತ್ತರಾಧಿಕಾರಿ ಪಟ್ಟಾಭಿಷೇಕ: ಅದೇ ರೀತಿ ಬಂಡೇ ಮಠದ ಉತ್ತರಾಧಿಕಾರಿಯಾಗಿ ಮಹಾಲಿಂಗ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಹರ್ಷ), ದೇವನಹಳ್ಳಿಯ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಸದಾಶಿವ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಗೌರಿಶ್ ಕುಮಾರ್) ಎಂದು ಸಭೆಯಲ್ಲಿ ವಿವಿಧ ಮಠಾಧ್ಯಕ್ಷರು ಹಾಗೂ ಮಠದ ಪ್ರಮುಖರು ಘೋಷಿಸಿದರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಸಿದ್ದಗಂಗಾ ಮಠದ ಆಡಳಿತ ಮಂಡಳಿ ನಿರ್ಧರಿಸಿತ್ತು. ನೂತನವಾಗಿ ಆಯ್ಕೆಯಾಗಿರುವ ಮೂವರಿಗೂ ಇಂದು ಉತ್ತರಾಧಿಕಾರಿ ಪಟ್ಟಾಭಿಷೇಕ ಮಾಡಲಾಯಿತು.
ಸಿದ್ದಗಂಗಾ ಮಠದ ಆಡಳಿತ ಮಂಡಳಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದು ಬಸವ ಜಯಂತಿ ಹಿನ್ನೆಲೆ ಮಠದಲ್ಲಿ ಆಯೋಜಿಸಲಾಗಿದ್ದ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಮಠದ ಭಕ್ತರು, ಸಾರ್ವಜನಿಕರು ಹಾಗೂ ಹಿತೈಷಿಗಳು ಭಾಗಿಯಾಗಿದ್ದರು. ಬೆಳಗ್ಗೆಯಿಂದಲೇ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಸಿದ್ದಗಂಗಾ ಮಠದ ಜಂಗಮ ಪಟ್ಟಾಧಿಕಾರ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಸುತ್ತೂರು ಶ್ರೀಗಳು ಉದ್ಘಾಟಿಸಿದರು. ವಿಶೇಷ ಸಮಾರಂಭದಲ್ಲಿ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಭಾಗಿಯಾಗಿದ್ದರು.
ಇದನ್ನೂ ಓದಿ: ನಾಳೆ ಸಿದ್ದಗಂಗಾ ಮಠದ ಉತ್ತರಾಧಿಕಾರಿಗೆ ಪಟ್ಟಾಭಿಷೇಕ.. ನೀತಿ ಸಂಹಿತೆ ಹಿನ್ನೆಲೆ ಸರಳ ಕಾರ್ಯಕ್ರಮ
ಏಪ್ರಿಲ್ 23 ರಂದು ಅಕ್ಷಯ ತೃತೀಯ ದಿನ ಬಸವ ಜಯಂತಿ ಇರುವುದರಿಂದ ಅಂದು ಮನೋಜ್ ಕುಮಾರ್ ಅವರಿಗೆ ಸಿದ್ದಗಂಗಾ ಮಠದ ಉತ್ತರಾಧಿಕಾರಿ ನಿರಂಜನ ಪಟ್ಟಾಧಿಕಾರವನ್ನು ನೆರವೇರಿಸಲಾಗುವುದು ಎಂದು ಸಿದ್ದಗಂಗಾ ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ಟಿ ಕೆ ನಂಜುಂಡಪ್ಪ ಮಠದ ಸದಸ್ಯರಿಗೆ ಕಳುಹಿಸಿರುವ ಪತ್ರ ಒಂದರಲ್ಲಿ ಉಲ್ಲೇಖಿಸಿದ್ದರು.
ಉಪನ್ಯಾಸಕರಾಗಿದ್ದ ಮನೋಜ್ ಕುಮಾರ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನ ಹಳ್ಳಿಯ ಷಡಕ್ಷರಯ್ಯ ಮತ್ತು ವಿರೂಪಾಕ್ಷಮ್ಮರವರ ಪುತ್ರರಾದ ಮನೋಜ್ ಕುಮಾರ್ ಅವರು, ಬಿಈಡಿ, ಎಂಎಸ್ಸಿ, ಸಿಎಂಎ ಹಾಗೂ ವಿದ್ವತ್ ಪೂರ್ಣಗೊಳಿಸಿ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ: ಏ.23 ರಂದು ಪಟ್ಟಾಧಿಕಾರಿ ಮಹೋತ್ಸವ
10 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ಈಗ ಸಿದ್ದಗಂಗಾ ಮಠ 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಯಾವುದೇ ಜಾತಿ, ಧರ್ಮದ ಭೇದಭಾವವಿಲ್ಲದೆ ಶಿಕ್ಷಣವನ್ನು ನೀಡುತ್ತಿರುವ ವಿಶಿಷ್ಟ ಗುರುಕುಲ. ಮಠವು ವಿವಿಧ ಸ್ಥಳಗಳಲ್ಲಿ ಅಂಧ ಶಾಲೆಗಳನ್ನು ನಡೆಸುತ್ತಿದೆ ಮತ್ತು 100 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಸ್ವತಂತ್ರ ಹಾಸ್ಟೆಲ್ ಸೌಲಭ್ಯ ಸಹಿತ ಉಚಿತ ಶಿಕ್ಷಣ ಮತ್ತು ಆಹಾರವನ್ನು ನೀಡಲಾಗುತ್ತದೆ.