ತುಮಕೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು ಕೂಡ ಮುಂದುವರೆಯಿತು.
ಗ್ರಾಮ ಪಂಚಾಯತ್ ನೌಕರರ ಬಾಕಿ ವೇತನ ಪಾವತಿ ಮಾಡುವುದು, ಪಂಪ್ ಆಪರೇಟರ್ ಹುದ್ದೆಗೆ ಬಡ್ತಿ ನೀಡುವುದು, ಬಿಲ್ ಕಲೆಕ್ಟರ್ ಹುದ್ದೆಯಿಂದ ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವುದು, ಲೆಕ್ಕ ಸಹಾಯಕ ಹುದ್ದೆಗಳ ಬಡ್ತಿ ಮಾಡುವುದು, ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಬಡ್ತಿ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಾಕಿ ವೇತನ ಸಂಗ್ರಹದಲ್ಲಿ 14 ಮತ್ತು 15ನೇ ಹಣಕಾಸಿನ ಆಯೋಗದ ಹಣದಲ್ಲಿ ಬಾಕಿ ಉಳಿದ ಸಿಬ್ಬಂದಿ ವೇತನ ಪಾವತಿ ಮಾಡಬೇಕು, ನಿವೃತ್ತರಾದವರಿಗೆ 15 ತಿಂಗಳು ಗ್ರಾಚ್ಯುಟಿ ಕೊಡಬೇಕು, ಸೇವಾ ಪುಸ್ತಕ ತೆರೆಯಬೇಕು. ಸರ್ಕಾರದ ಆದೇಶದಂತೆ ಅನುಕಂಪದ ನೇಮಕಾತಿ ಮಾಡಲು ನಿರ್ದೇಶನ ನೀಡಬೇಕು, ಸರ್ಕಾರಿ ಆದೇಶಗಳನ್ನು ಜಾರಿಮಾಡದ ಪಿಡಿಒಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.