ತುಮಕೂರು : ವ್ಯವಹಾರದ ಹಿನ್ನೆಲೆ ಗ್ರಾನೈಟ್ ಅಂಗಡಿ ಮಾಲೀಕನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಹೊರವಲಯದಲ್ಲಿರುವ ಯಲ್ಲಾಪುರದ ಅಂಗಡಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಮೂಲದ ಜಾಕೀರ್ ಇಸ್ಮಾಯಿಲ್ (36) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ಜಾಕೀರ್ ವಾಸವಿದ್ದರು. ನೂತನ ಗ್ರಾನೈಟ್ ಅಂಗಡಿಯನ್ನ ಜಾಕೀರ್ 2 ತಿಂಗಳ ಹಿಂದೆ ಯಲ್ಲಾಪುರದಲ್ಲಿ ತೆರೆದಿದ್ದರು.
ಜಾಕೀರ್ ಸಹಾಯಕ ಖಾದರ್ ಪೊಲೀಸರ ವಶಕ್ಕೆ: ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಶಂಕೆಯಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಾಕೀರ್ ಸಹಾಯಕ ಖಾದರ್‌ನನ್ನ ವಶಕ್ಕೆ ಪಡೆದಿದ್ದಾರೆ.
ಜಾಕೀರ್ ಶವ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ಮೃತ ಜಾಕೀರ್‌ನ ಪತ್ನಿ ಹಾಗೂ ಸಂಬಂಧಿಕರು ಬಂದಿದ್ದಾರೆ. ಈ ವೇಳೆ ಅವರ ರೋಧನೆ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಕೃಷ್ಣ ಮೃಗದ ಚರ್ಮ, ಕೊಂಬು ಮಾರಾಟಕ್ಕೆ ಯತ್ನ: ಓರ್ವನ ಬಂಧನ
ಯಾವುದೇ ರೀತಿಯ ಗಲಭೆ ಇಲ್ಲದೆ ಬದುಕು ನಡೆಸುತ್ತಿದ್ದ: ಘಟನೆಯ ಬಗ್ಗೆ ಸಹೋದರ ಮೊಹಮ್ಮದ್ ಇರ್ಷಾದ್ ಅವರು ಪ್ರತಿಕ್ರಿಯಿಸಿದ್ದು, ತುಮಕೂರು ಹೊರವಲಯದಲ್ಲಿ ನನ್ನ ಚಿಕ್ಕಮ್ಮನ ಮಗನ ಕೊಲೆ ಆಗಿದೆ. ಇಸ್ಲಾಯಿಲ್ ಜಾಕೀರ್ ಎಂಬುವವರು ಮೂಲತಃ ಚಿಕ್ಕಮಗಳೂರಿನವರು. ಇಲ್ಲಿಯೇ ಗ್ರಾನೈಟ್ ಅಂಗಡಿ ಮಾಡಿಕೊಂಡು ಒಂದು ವರ್ಷದಿಂದ ಇಲ್ಲಿಯೇ ವಾಸವಿದ್ದಾರೆ. ಯಾವುದೇ ರೀತಿಯ ಗಲಭೆ ಇಲ್ಲದೆ ಬದುಕು ನಡೆಸುತ್ತಿದ್ದರು. ಧಾರ್ಮಿಕ ಆಚರಣೆಯನ್ನು ಮಾಡಿಕೊಂಡು ಬದುಕುತ್ತಿದ್ದರು. ಅವರ ಫ್ಯಾಮಿಲಿಯೂ ಕೂಡಾ ಮೂರು ತಿಂಗಳ ಹಿಂದೆ ಶಿಫ್ಟ್ ಆಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರಿನ ಕುಖ್ಯಾತ ರೌಡಿ ಕೊಲೆ: ತಮಿಳುನಾಡಿನ ಕಾಡಿನಲ್ಲಿ ಶವವಾಗಿ ಪತ್ತೆ
ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ: ನಮಗೆ ಈ ರೀತಿ ಕೊಲೆ ನಡೆದಿರುವ ವಿಚಾರ ತಿಳಿದುಬಂದಿದ್ದರಿಂದ ನಾವು ಕುಟುಂಬದ ಸಮೇತರಾಗಿ ಬಂದಿದ್ದೇವೆ. ಇಬ್ಬರು ಬಂದು ಮಾರಾಕಾಸ್ತ್ರಗಳಿಂದ ಹೊಡೆದಿದ್ದಾರೆ ಎಂಬುದು ಗೊತ್ತಾಯ್ತು. ಸರ್ಕಲ್ ಇನ್ಸ್ಪೆಕ್ಟರ್ ಅವರು ನಮಗೆ ಕರೆ ಮಾಡಿದ್ದರು. ಈಗ ನಾವು ಮೃತದೇಹವನ್ನು ನೋಡುವುದಕ್ಕೆಂದು ಬಂದಿದ್ದೇವೆ. ಆದರೆ ಅವರು ತೋರಿಸುತ್ತಿಲ್ಲ. ಘಟನೆಯಿಂದ ನಾವು ತುಂಬಾ ಆಘಾತಕ್ಕೆ ಒಳಗಾಗಿದ್ದೇವೆ. ಘಟನೆಯ ಸಂದರ್ಭದಲ್ಲಿ 8 ವರ್ಷದ ಮಗು ಇತ್ತಂತೆ. ಆಗ ಅದರ ಮುಂದೆಯೇ ಹೊಡೆದಿದ್ದಾರೆ. ಅವರ 36 ವರ್ಷದ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಇದೇ ಮೊದಲ ಬಾರಿಗೆ ಅವರ ಮೇಲೆ ದಾಳಿ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಭೇಟಿ, ಪರಿಶೀಲನೆ ನಡೆಸಿದರು. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಳೆ ದ್ವೇಷದ ಹಿನ್ನೆಲೆ ಹತ್ಯೆ: ಎರಡೇ ದಿನದಲ್ಲಿ 7 ಮಂದಿ ಕೊಲೆ ಆರೋಪಿಗಳ ಬಂಧನ